ADVERTISEMENT

ಮುಳಗುಂದ | ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:11 IST
Last Updated 27 ನವೆಂಬರ್ 2025, 5:11 IST
ಮುಳಗುಂದದ ರೈತ ಸಂಘದ ಸದಸ್ಯರು ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಗದಗ-ಲಕ್ಷ್ಮೇಶ್ವರ ರಸ್ತೆಯ ಬಸಾಪೂರ ಕ್ರಾಸ್ ಬಳಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌ ಅವರಿಗೆ ಮನವಿ ಸಲ್ಲಿಸಿದರು 
ಮುಳಗುಂದದ ರೈತ ಸಂಘದ ಸದಸ್ಯರು ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಗದಗ-ಲಕ್ಷ್ಮೇಶ್ವರ ರಸ್ತೆಯ ಬಸಾಪೂರ ಕ್ರಾಸ್ ಬಳಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌ ಅವರಿಗೆ ಮನವಿ ಸಲ್ಲಿಸಿದರು    

ಮುಳಗುಂದ: ಇಲ್ಲಿಯ ರೈತ ಸಂಘದ ಸದಸ್ಯರು ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ಗದಗ-ಲಕ್ಷ್ಮೇಶ್ವರ ರಸ್ತೆಯ ಬಸಾಪೂರ ಕ್ರಾಸ್ ಬಳಿ ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಗದಗ ಉಪವಿಭಾಗಧಿಕಾರಿ ಗಂಗಪ್ಪ ಭೇಟಿ ನೀಡಿ ರೈತರ ಮನವಿ ಸ್ವೀಕರಿಸಲು ಮುಂದಾದಾಗ ಜಿಲ್ಲಾಧಿಕಾರಿಗಲೇ ಬರಬೇಕು ಎಂದು ರೈತರು ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌ ಸ್ಥಳಕ್ಕೆ ಬಂದು ರೈತರ ಮನವಿ ಸ್ವಿಕರಿಸಿದರು.

ರೈತ ಮುಖಂಡ ಬಸವರಾಜ ಕರಿಗಾರ ಮಾತನಾಡಿ, ‘ಅತೀವೃಷ್ಟಿಯಿಂದ ಮುಂಗಾರು ಬೆಳೆಹಾನಿ ಸಂಭವಿಸಿ ರೈತರಿಗೆ ನಷ್ಟವಾಗಿದೆ. ಮೆಕ್ಕೆಜೋಳ ಬೆಲೆ ಕುಸಿತವಾಗಿದ್ದು, ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಿಎಂ ಸಿದ್ದರಾಮಯ್ಯ ಬೆಂಬಲ ಬೆಲೆಯಲ್ಲಿ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವ ಘೋಷಣೆ ಮಾಡಿದ್ದು, ಖರೀದಿ ಕೇಂದ್ರ ಆರಂಭಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭ, ಬೆಳೆ ವಿಮಾ ಪರಿಹಾರ, ಬೆಳೆಸಾಲ ಮನ್ನಾ ಸೇರಿದಂತೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೆರಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವಿಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌ ಮಾತನಾಡಿ, ‘ಬೆಳೆ ನಷ್ಟ ಕುರಿತು ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿಸುವಂತೆ ಸಿಎಂ ಒಪ್ಪಿಗೆ ಸೂಚಿಸಿದ್ದು, ಸರ್ಕಾರ ಆದೇಶ ಬಂದ ತಕ್ಷಣವೇ ಕೇಂದ್ರ ತೆರೆಯಲಾಗುವದು. ಜಿಲ್ಲೆಯಲ್ಲಿ 82 ಸಾವಿರ ರೈತರ ಖಾತೆಗಳಿಗೆ ₹91 ಕೋಟಿ ಹಣ ಜಮೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಬಂದ ಪರಿಹಾರವನ್ನು ನ.27ರಿಂದ ಜಮೆ ಮಾಡಲಾಗುವುದು’ 

ಗದಗ ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ, ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರಣ್ಣವರ, ಡಿವೈಎಸ್‍ಪಿ ಮುರ್ತುಜ್ ಖಾದರಿ, ಸಿಪಿಐ ಸಂಗಮೇಶ ಶಿವಯೋಗಿ, ರೈತ ಸಂಘದ ಮುಖಂಡರಾದ ಬಸವರಾಜ ಸಾಬಳೆ, ಮಹ್ಮದಲಿ ಶೇಖ, ಮಹಾಂತೇಶ ಗುಂಜಳ, ದೇವರಾಜ ಸಂಗನಪೇಟಿ, ಮುತ್ತಣ್ಣ ಪಲ್ಲೆದ, ದತ್ತಪ್ಪ ಯಳವತ್ತಿ, ಗುಡುಸಾಬ ಗಾಡಿ, ಗಂಗಪ್ಪ ಕತ್ತಿ, ದೇವಪ್ಪ ಅಣ್ಣಿಗೇರಿ, ಕಿರಣ ಕುಲಕರ್ಣಿ ಇದ್ದರು. 

12ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ ಲಕ್ಷ್ಮೇಶ್ವರ:
ಪಟ್ಟಣದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ನಡೆಸಿದ ಅಹೋರಾತ್ರಿ ಧರಣಿ ಬುಧವಾರ 12ನೇ ದಿನಕ್ಕೆ ಕಾಲಿಟ್ಟಿದ್ದು ರೈತರು ‘ನಾವು ಮೆಕ್ಕೆಜೋಳ ಬೆಳೆದಿದ್ದೇವೆ’ ಎಂದು ಘೋಷಿಸುವ ಮೂಲಕ ಉತಾರ ಚಳವಳಿ ನಡೆಸಿದರು. ವಕೀಲ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ ‘ಮೆಕ್ಕೆಜೋಳ ಬೆಳೆದ ರೈತರು ನ್ಯಾಯಯುತ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸಲು ನಿರ್ಧರಿಸಿದ್ದು ಖರೀದಿ ಕೇಂದ್ರ ಆರಂಭಿಸಿಲ್ಲ. ಕಾರಣ ರೈತರ ಹೋರಾಟ ಉಗ್ರ ಸ್ವರೂಪ ತಾಳುವ ಮುನ್ನವೇ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಆಗ್ರಹಿಸಿದರು. ಹೋರಾಟದ ನೇತೃತ್ವ ವಹಿಸಿದ ಮಂಜುನಾಥ ರವಿಕಾಂತ ಅಂಗಡಿ ನಾಗರಾಜ ಚಿಂಚಲಿ ಮಾತನಾಡಿದರು. ಶರಣು ಗೋಡಿ ಪರಮೇಶ ನಾಯಕ ನೀಲಪ್ಪ ಶರಸೂರಿ ಮಾತನಾಡಿದರು. ಆದೇಶ ಹುಲಗೂರ ಬಸಪ್ಪ ಶರಸೂರಿ ಪ್ರಕಾಶ ಮೇವುಂಡಿ ಚನ್ನಬಸಗೌಡ್ರ ಉದ್ದನಗೌಡ್ರ ಮುದಕಣ್ಣ ಗದ್ದಿ ಸುರೇಶ ಹಟ್ಟಿ ಗಂಗಯ್ಯ ಕಲಕೇರಿಮಠ ಬಸವರಾಜ ಹಿರೇಮನಿ ಅಶೋಕ ಅದರಗುಂಚಿ ಮುತ್ತಣ್ಣ ಟೋಕಾಳಿ ಈರಣ್ಣ ಹುಲಕೋಟಿ ಇಸ್ಮಾಯಿಲ್ ಆಡೂರ ಅತ್ತಾರ ಆಡೂರ ಇದ್ದರು.