
ಮುಂಡರಗಿ: ಸಾಂಪ್ರದಾಯಿಕ ಕೃಷಿಯೊಂದಿಗೆ ಕೃಷಿಗೆ ಪೂರಕವಾದ ಹೈನುಗಾರಿಕೆ ಮಾಡುತ್ತಾ ನಿತ್ಯ ಉತ್ತಮ ಆದಾಯ ಗಳಿಸುವ ಮೂಲಕ ತಾಲ್ಲೂಕಿನ ಬೂದಿಹಾಳ ಗ್ರಾಮದ ರೈತ ಹಾಲೇಶ ಲಿಂಗಶಟ್ಟರ ಎಲ್ಲರ ಗಮನ ಸೆಳೆದಿದ್ದಾರೆ.
ಹಾಲೇಶ ಅವರು ತಮ್ಮ ನಾಲ್ಕುವರೆ ಎಕರೆ ಜಮೀನಿನ ಪೈಕಿ ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಎಕರೆಗೆ 23ರಂತೆ ಒಟ್ಟು 46 ಕ್ವಿಂಟಲ್ ಮೆಕ್ಕೆಜೋಳ ಬೆಳೆದು ಅದರಿಂದ ₹82 ಸಾವಿರ ಆದಾಯ ಪಡೆದುಕೊಂಡಿದ್ದಾರೆ. ಜಮೀನಿನ ಬದುವುಗಳಲ್ಲಿ ಎಂಟು ಮಾವು, ಆರು ಚಿಕ್ಕು ಹಾಗೂ ನಾಲ್ಕು ತೆಂಗಿನ ಮರಗಳನ್ನು ನೆಟ್ಟಿದ್ದು, ಅವುಗಳಿಂದ ನಿರಂತರ ಆದಾಯ ಪಡೆದುಕೊಳ್ಳುತ್ತಿದ್ದಾರೆ.
ಹಾಲೇಶ ಅವರು ತಮ್ಮ ಮನೆಯಲ್ಲಿ ಅತ್ಯಧಿಕ ಹಾಲು ಕೊಡುವ ಎಚ್.ಎಫ್. ತಳಿಯ 16 ಹಸುಗಳನ್ನು ಸಾಕಿದ್ದಾರೆ. ಪ್ರತಿ ಹಸು ನಿತ್ಯ 12ರಿಂದ 14 ಲೀಟರ್ ಹಾಲು ನೀಡುತ್ತಿದ್ದು, 16 ಹಸುಗಳಿಂದ ನಿತ್ಯ 180– 200 ಲೀಟರ್‌ಗಿಂತ ಹೆಚ್ಚು ಹಾಲು ಪಡೆದುಕೊಳ್ಳುತ್ತಿದ್ದಾರೆ. ₹35ರಂತೆ ಒಂದು ಲೀಟರ್ ಹಾಲು ಮಾರಾಟ ಮಾಡುತ್ತಿದ್ದು, ನಿತ್ಯ ದೊರೆಯುವ ಹಾಲನ್ನು ಗ್ರಾಮದಲ್ಲಿರುವ ಕೆ.ಎಂ.ಎಫ್. ಕೇಂದ್ರಕ್ಕೆ ನೀಡುತ್ತಿದ್ದು, ಬೂದಿಹಾಳ ಗ್ರಾಮದಲ್ಲಿ ಅತ್ಯಧಿಕ ಹಾಲು ಉತ್ಪಾದಿಸುವ ರೈತನೆಂಬ ಹೆಗ್ಗಳಿಕೆಗೆ ಹಾಲೇಶ ಪಾತ್ರರಾಗಿದ್ದಾರೆ.
ಹಾಲು ಮಾರಾಟದಿಂದಲೇ ಹಾಲೇಶ ಅವರು ಪ್ರತಿನಿತ್ಯ ₹6,000ದಿಂದ ₹7,000 ಆದಾಯ ಪಡೆದುಕೊಳ್ಳುತ್ತಿದ್ದು, ಮಾಸಿಕ ಸುಮಾರು ₹2 ಲಕ್ಷ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರವು ರೈತರ ಪ್ರತೀ ಲೀಟರ್ ಹಾಲಿಗೆ ₹5 ಪ್ರೋತ್ಸಾಹ ದನ ನೀಡುತ್ತಿದೆ. ಮೂರು ತಿಂಗಳಿಗೊಮ್ಮೆ ಸರ್ಕಾರದ ಹಣ ಅವರ ಖಾತೆಗೆ ಜಮೆಯಾಗುತ್ತಿದ್ದು, ಅದರಿಂದಲೂ ಹಾಲೇಶ ಅವರು ಅಪಾರ ಹಣ ಪಡೆದುಕೊಳ್ಳುತ್ತಿದ್ದಾರೆ.
ಹಸುಗಳಿಂದ ಅಪಾರ ಸಗಣಿ ಗೊಬ್ಬರ ಉತ್ಪಾದನೆಯಾಗುತ್ತಿದ್ದು, ಸಗಣಿ ಮಾರಾಟ ಮಾಡಿ ಅದರಿಂದಲೂ ಸಾಕಷ್ಟು ಹಣ ಗಳಿಸುತ್ತಿದ್ದಾರೆ.
ಹಸುಗಳಿಗೆ ಆಹಾರ, ನೀರು ನೀಡುವುದು ಸೇರಿದಂತೆ ಹಾಲೇಶ ಅವರ ಪತ್ನಿ ರೇಖಾ ಅವರು ನೆರವು ನೀಡುತ್ತಿದ್ದು, ದಂಪತಿಗಳಿಬ್ಬರು ಶ್ರಮವಹಿಸಿ ಹೈನುಗಾರಿಕೆಯಲ್ಲಿ ಯಶಸ್ಸು ಕಂಡಿದ್ದಾರೆ.
ಹಸುಗಳಿಗೆ ನಿತ್ಯ ಹತ್ತಿಹಿಂಡಿ: ಹಸುಗಳಿಗೆ ನಿತ್ಯ ಹಸಿಹುಲ್ಲು ನೀಡುವ ಸಲುವಾಗಿ ಹಾಲೇಶ ಅವರು ಎರಡುವರೆ ಎಕರೆ ಜಮೀನಿನಲ್ಲಿ ಹುಲ್ಲು ಬೆಳೆದಿದ್ದು, ನಿತ್ಯ ಹಸುಗಳಿಗೆ ತಾಜಾ ಹುಲ್ಲು ನೀಡುತ್ತಾರೆ. ಜೊತೆಗೆ ಕೊಟ್ಟೂರಿನಿಂದ ತರಿಸಿರುವ ಹತ್ತಿಹಿಂಡಿಯನ್ನು ನಿತ್ಯ ಹಸುಗಳಿಗೆ ನೀಡುತ್ತಿದ್ದಾರೆ. ದಂಪತಿಗಳಿಬ್ಬರೂ ಹಸುಗಳನ್ನು ತಮ್ಮ ಮಕ್ಕಳಂತೆ ಜೋಪಾನ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲ ಹಸುಗಳು ನಿರೀಕ್ಷಿಸಿದಷ್ಟು ಹಾಲು ನೀಡುತ್ತಿವೆ.
ನಮ್ಮ ಭಾಗದಲ್ಲಿ ಹವಾಮಾನ ವೈಪರೀತ್ಯದಿಂದ ಕೃಷಿಯಲ್ಲಿ ನಾವು ನಿರೀಕ್ಷಿಸಿದಷ್ಟು ಫಸಲು ದೊರೆಯುವುದಿಲ್ಲ. ಹೈನುಗಾರಿಕೆಯಂತಹ ಕೃಷಿಯಾಧಾರಿತ ಉಪಕಸುಬುಗಳು ನಮ್ಮ ಕೈಹಿಡಿಯುತ್ತವೆಹಾಲೇಶ ಲಿಂಗಶಟ್ಟರ ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.