
ಮುಂಡರಗಿ: ಮುಂಡರಗಿ, ಶಿರಹಟ್ಟಿ ಹಾಗೂ ಗದಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ವಿಶಾಲವಾಗಿ ಹಬ್ಬಿರುವ ಕಪ್ಪತಗುಡ್ಡ ವನ್ಯಜೀವಿಧಾಮದ ಮಹತ್ವ ಹಾಗೂ ಅದರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪಟ್ಟಣದ ನ್ಯಾಯಾಲಯ ಸಂರ್ಕೀಣದ ಮುಂದೆ ಪರಿಸರ ಜಾಗೃತಿ ವೃತ್ತ ನಿರ್ಮಿಸಲು ಅನುಮತಿ ನೀಡಬೇಕು ಎಂದು ಕಪ್ಪತಗುಡ್ಡ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ಪುರಸಭೆಯ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ಅರಬಾವಿ-ಚಳ್ಳಕೇರಿ ರಾಜ್ಯ ಹೆದ್ದಾರಿಯ ಬಳಿ ನ್ಯಾಯಾಲಯ ಸಂಕೀರ್ಣ ಹಾಗೂ ಎಪಿಎಂಸಿ ಮುಂದೆ ತುಂಬಾ ವಿಶಾಲವಾದ ವೃತ್ತವಿದ್ದು, ಅಲ್ಲಿ ಮೂರು ರಸ್ತೆಗಳು ಕೂಡುತ್ತವೆ. ಹೀಗಾಗಿ ಅಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದ್ದು, ಅಲ್ಲಿ ವೃತ್ತ ನಿರ್ಮಿಸಿದರೆ ಅಪಘಾತ ಹಾಗೂ ವಾಹನಗಳ ವೇಗವನ್ನು ಸಹಜವಾಗಿ ನಿಯಂತ್ರಿಸಬಹುದಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಕಪ್ಪತಗುಡ್ಡವು ಪ್ರಮುಖ ಜೀವವೈವಿದ್ಯ ಕೇಂದ್ರವಾಗಿದ್ದು, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಪ್ರಖ್ಯಾತಿ ಹೊಂದಿದೆ. ಕಪ್ಪತಗುಡ್ಡವು ಅಳಿವಿನಂಚಿನಲ್ಲಿರುವ 21ಕ್ಕೂ ಹೆಚ್ಚು ವಿವಿಧ ಜಾತಿಯ ವನ್ಯಜೀವಿಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಸಲಹುತ್ತಿದೆ. ಚಿರತೆ, ಹೈನಾ, ತೋಳ, ನರಿ, ಮೊಲ, ಕತ್ತೆಕಿರುಬ, ನವಿಲು ಮೊದಲಾದ ಕಾಡು ಪ್ರಾಣಿಗಳಿಗೆ ಆಶ್ರಯ ತಾಣವಾಗಿದೆ ಎಂದು ತಿಳಿಸಿದ್ದಾರೆ.
ಗುಡ್ಡದಲ್ಲಿ ತುಂಬಾ ಅಪರೂಪವಾದ ಔಷಧೀಯ ಸಸ್ಯಗಳು ಬೆಳೆಯುತ್ತಿದ್ದು, ಅವುಗಳ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಬೇಕಾಗಿದೆ. ಗುಡ್ಡದ ಮಡಿಲಿನಲ್ಲಿ ಮ್ಯಾಂಗನೀಸ್ ಸೇರಿದಂತೆ ಬೆಲೆಬಾಳುವ ಖನಿಜ ಸಂಪತ್ತು ಅಡಗಿದ್ದು, ಅದನ್ನು ನಾವೆಲ್ಲ ಸಂರಕ್ಷಿಸಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಕಪ್ಪತಗುಡ್ಡವು ತುಂಬಾ ಸಂಭ್ರದ್ಧವಾಗಿ ಬೆಳೆಯುತ್ತಿದ್ದು, ಅದರ ಸಂರಕ್ಷಣೆ ನಮ್ಮೆಲ್ಲರ ಮೇಲಿದೆ. ಈ ಎಲ್ಲ ಕಾರಣಗಳನ್ನು ವೃತ್ತದ ಮೂಲಕ ಎಲ್ಲ ಜನತೆಗೆ ತಿಳೀಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
’ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪರಿಸರ ಜಾಗೃತಿ ವೃತ್ತವು ರಾಜ್ಯಕ್ಕೆ ಮಾದರಿಯಾಗಲಿದ್ದು, ಅಂತಹ ವೃತ್ತಗಳು ರಾಜ್ಯದ ಬೇರಾವುದೇ ಪಟ್ಟಣ ಹಾಗೂ ನಗರಗಳಲ್ಲಿಲ್ಲ. ವೃತ್ತದ ಸುತ್ತಲೂ ಕೇವಲ ಪರಿಸರ ಸಂಬಂಧಿತ ಕಲಾಕೃತಿಗಳು ಹಾಗೂ ಪರಿಸರ ಜಾಗೃತಿ ಮೂಡಿಸುವ ಸಂದೇಶಗಳನ್ನು ಚಿತ್ರಿಸುವ ಉದ್ದೇಶ ಹೊಂದಿದ್ದು, ಯಾವುದೇ ವಾಣಿಜ್ಯ ಅಥವಾ ವ್ಯವಹಾರದ ದುರುದ್ದೇಶ ಹೊಂದಿರುವುದಿಲ್ಲ. ಆದ್ದರಿಂದ ಪರಿಸರ ಜಾಗೃತಿ ವೃತ್ತ ನಿರ್ಮಾಣಕ್ಕೆ ಅನುಮತಿ ನೀಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.