ADVERTISEMENT

ಶೇ 4 ಮೀಸಲು ರದ್ದು ಹಿಂಪಡೆಯಲಿ: ದಾವಣಗೆರೆ, ಮುಳಗುಂದ, ಸವದತ್ತಿಯಲ್ಲಿ ಪ್ರತಿಭಟನೆ

ದಾವಣಗೆರೆ, ಮುಳಗುಂದ, ಸವದತ್ತಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 19:04 IST
Last Updated 29 ಮಾರ್ಚ್ 2023, 19:04 IST

ಮುಳಗುಂದ (ಗದಗ ಜಿಲ್ಲೆ): ‘ಪ್ರವರ್ಗ 2‘ಬಿ’ ಅಡಿ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲಾತಿ ರದ್ದು ಪಡಿಸಿದ ಆದೇಶ ಹಿಂಪಡೆಯಬೇಕು’ ಎಂದು ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಇಮಾಮಸಾಬ್‌ ಶೇಖ್‌ ಆಗ್ರಹಿಸಿದರು.

ಅಂಜುಮನ್ ಎ ಇಸ್ಲಾಂ ಕಮಿಟಿಯು ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಪಟ್ಟಣ ಪಂಚಾಯಿತಿಯ ಮೂಲಕ ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

‘ಮುಸ್ಲಿಮರಿಗೆ ಪ್ರವರ್ಗ 2‘ಬಿ’ಅಡಿ ಇದ್ದ ಮೀಸಲಾತಿ ರದ್ದುಗೊಳಿಸಿರುವುದು ಸರಿಯಲ್ಲ. ಇದರಿಂದ ಸಮಾಜದ ಪ್ರಗತಿಗೆ ಹಿನ್ನಡೆಯಾಗಲಿದೆ. ಶೇ 4ರಷ್ಟು ಮೀಸಲಾತಿ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಮುದಾಯ ಎತ್ತಿಕಟ್ಟುವುದು ಸರಿಯಲ್ಲ (ಸವದತ್ತಿ, ಬೆಳಗಾವಿ ವರದಿ): ಮುಸ್ಲಿಮರ ಮೀಸಲಾತಿ ರದ್ದತಿ ಖಂಡಿಸಿ ಮುಸ್ಲಿಂ ಅಸೋಸಿಯೇಷನ್ ಸದಸ್ಯರು ಇಲ್ಲಿನ ತಹಶೀಲ್ದಾರ್‌ ಜಿ.ಬಿ.ಜಕ್ಕನಗೌಡರ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

‘ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ನೀಡಲು ವಿರೋಧವಿಲ್ಲ. ಆದರೆ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಜಾರಿಯಾಗುವವರೆಗೂ ಮೀಸಲಾತಿ ಬೇಕೇ ಬೇಕು. ಮುಖ್ಯಮಂತ್ರಿಗಳು ಮೀಸಲಾತಿ ಮುಂದಿಟ್ಟುಕೊಂಡು ಸಮುದಾಯಗಳನ್ನು ಎತ್ತಿಕಟ್ಟುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಮುಸ್ಲಿಮರ ಮೌನ ಪ್ರತಿಭಟನೆ (ದಾವಣಗೆರೆ): ಅಲ್ಪಸಂಖ್ಯಾತರ ಶೇ 4ರಷ್ಟು ಮೀಸಲಾತಿ ರದ್ದುಗೊಳಿಸಿರುವುದರ ವಿರುದ್ಧ ತಾಲ್ಲೂಕು ಮುಸ್ಲಿಮರು ಅಂಜುಂ–ಎ–ಮುಸ್ಲಿಂ ಸಮಿತಿಯಿಂದ ಚನ್ನಗಿರಿಯಲ್ಲಿ ಬುಧವಾರ ಮೌನ ಪ್ರತಿಭಟನೆ ನಡೆಸಲಾಯಿತು.

ಸರ್ಕಾರದ ನಿರ್ಧಾರ ವಿರೋಧಿಸಿ ಮಾರ್ಚ್ 31ರಂದು ದಾವಣಗೆರೆ ನಗರದ ಮಂಡಕ್ಕಿ ಭಟ್ಟಿ ಲೇಔಟ್‌ನ ಮಿಲಾದ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

‘ಒಕ್ಕಲಿಗರು, ಲಿಂಗಾಯತರಿಗೆ ಶೇ 10, ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡಲಿ’

ಮಡಿಕೇರಿ: ‘ಒಕ್ಕಲಿಗರು, ಲಿಂಗಾಯತರಿಗೆ ಶೇ 10 ಹಾಗೂ ಮುಸ್ಲಿಮರಿಗೆ
ಶೇ 5 ಮೀಸಲಾತಿ ನೀಡಬೇಕು’ ಎಂದು ಕೊಡಗು ಮುಸ್ಲಿಂ ಅಸೋಸಿಯೇಷನ್ ಒತ್ತಾಯಿಸಿದೆ.

‘ಚುನಾವಣೆ ಹಿನ್ನೆಲೆಯಲ್ಲಿ ಲಾಭ ಪಡೆಯಲೆಂದೇ ಮುಸ್ಲಿಮ ಮೀಸಲಾತಿಯನ್ನು ಕಿತ್ತು ಒಕ್ಕಲಿಗರು ಹಾಗೂ ಲಿಂಗಾಯತರಿಗೆ ನೀಡಲಾಗಿದೆ‘ ಎಂದು ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ಹಸೈನಾರ್ ಹಾಜಿ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು ‘ಸರ್ಕಾರದ ನಿರ್ಧಾರದಿಂದ ಯಾವ ಸಮುದಾಯಕ್ಕೂ ಒಳ್ಳೆಯದಾಗುವುದಿಲ್ಲ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.