ರೋಣ: ‘ರೋಣ ಪಟ್ಟಣ ಅಭಿವೃದ್ಧಿಗಾಗಿ ಈಗಾಗಲೇ ಸಾಕಷ್ಟು ಅನುದಾನ ತರಲಾಗಿದೆ, ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಸುಂದರ, ಸುಸಜ್ಜಿತ ನಗರವನ್ನಾಗಿ ನಿರ್ಮಾಣ ಮಾಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ’ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಸೂಡಿ ವೃತ್ತದಲ್ಲಿ ₹3.75 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ರೋಣ ಪಟ್ಟಣದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಪಟ್ಟಣ ಮುಖ್ಯ ರಸ್ತೆ, ಚರಂಡಿ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳು ಈಗಾಗಲೇ ಕಾರ್ಯಾರಂಭಗೊಂಡಿವೆ’ ಎಂದರು.
‘ಪಟ್ಟಣ ಅಭಿವೃದ್ಧಿಗಾಗಿ ಸಾರ್ವಜನಿಕರ ಸಹಭಾಗಿತ್ವವೂ ಪ್ರಮುಖವಾಗಿದೆ. ರೈತರು ಬೆಳೆದ ಬೆಳಗಳ ಸಂರಕ್ಷಣೆಯ ನಿಟ್ಟಿನಲ್ಲಿ ಶಿಥಲೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ತಾಂತ್ರಿಕ ಶಿಕ್ಷಣ ಸ್ಥಳೀಯ ಮಟ್ಟದಲ್ಲಿ ದೊರಕಿಸುವ ಉದ್ದೇಶದಿಂದ ಜಿ.ಟಿ.ಟಿ.ಸಿ ಕಾಲೇಜು ಸ್ಥಾಪನೆ, ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿ ಪಾರ್ಕ್ ನಿರ್ಮಾಣ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪುರಸಭೆ ಸದಸ್ಯ ಮಿಥುನ್.ಜಿ.ಪಾಟೀಲ ಮಾತನಾಡಿದರು.
ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವೀರಣ್ಣ ಶೆಟ್ಟರ, ಹಿರಿಯ ಕಾಂಗ್ರೆಸ್ ಮುಖಂಡರಾದ ವಿ.ಆರ್. ಗುಡಿಸಾಗರ, ರೋಣ ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನಮಂತ ತಳ್ಳಿಕೇರಿ, ರೋಣ ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಪ್ರಭು ಮೇಟಿ, ಪರಶುರಾಮ ಅಳಗವಾಡಿ, ಎಚ್.ಎಸ್. ಸೊಂಪೂರ, ದಶರಥ ಗಾಣಿಗೇರ, ಯೂಸೂಫ್ ಇಟಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.