ADVERTISEMENT

ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕ್ರಮವಹಿಸಿ

ಭಾರತೀಯ ಕಿಸಾನ್‌ ಸಂಘದ ವೀರಣ್ಣ ಮಜ್ಜಗಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಮೇ 2022, 2:34 IST
Last Updated 5 ಮೇ 2022, 2:34 IST

ಗದಗ: ‘ಮುಂಗಾರು ಶೀಘ್ರ ಆರಂಭಗೊಳ್ಳಿದ್ದು, ಈ ಹಂಗಾಮಿನಲ್ಲಿ ರೈತರಿಗೆ ಬೇಕಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು, ದರಪಟ್ಟಿಯನ್ನು ಯಾವುದೇ ಮಾರಾಟಗಾರರು ಪಾಲಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವವರ ಮೇಲೆ ಅಧಿಕಾರಿಗಳು ತೀವ್ರ ನಿಗಾ ಇಡಬೇಕು’ ಎಂದು ಭಾರತೀಯ ಕಿಸಾನ್‌ ಸಂಘದ ಉತ್ತರ ಪ್ರಾಂತ್ಯ ಉಪಾಧ್ಯಕ್ಷ ವೀರಣ್ಣ ಮಜ್ಜಗಿ ಆಗ್ರಹಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವ ಕಂಪನಿ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡ ಬಗ್ಗೆ ಉದಾಹರಣೆ ಸಿಗುತ್ತಿಲ್ಲ. ಅಕ್ರಮಗಳನ್ನು ತಡೆಯಲು ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ತಪ್ಪು ಕಂಡುಬಂದಲ್ಲಿ ಅವರನ್ನು ಶಿಕ್ಷಿಸಬೇಕು’ ಎಂದು ಒತ್ತಾಯಿಸಿದರು.

‘ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎಂಬ ಮಾತಿನಂತೆ ಯಾವ ಸರ್ಕಾರಗಳು ಬಂದರೂ ರೈತರ ಬದುಕು ಹಸನಾಗುತ್ತಿಲ್ಲ. 2021-22ನೇ ಸಾಲಿನ ಈರುಳ್ಳಿ, ಮೆಣಸಿನಕಾಯಿ, ಶೇಂಗಾ, ಹತ್ತಿ ಬೆಳೆಹಾನಿ ಪರಿಹಾರ ಮತ್ತು ಬೆಳೆ ವಿಮೆ ಇನ್ನೂ ಕೆಲವರಿಗೆ ಬಂದಿಲ್ಲ. ಈ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಲಿದ್ದೇವೆ’ ಎಂದು ಹೇಳಿದರು.

ADVERTISEMENT

‘ತೋಟಗಾರಿಕೆ ಇಲಾಖೆಯ ಬಹುತೇಕ ಯೋಜನೆಗಳು ಅನರ್ಹರ ಪಾಲಾಗುತ್ತಿವೆ. ಈರುಳ್ಳಿ ಬೆಳೆಯದವರಿಗೆ ಈರುಳ್ಳಿ ಶೆಡ್ ನಿರ್ಮಾಣ, ಕೈ ಮುಚ್ಚಿ ಹಣ ಕೊಟ್ಟವರಿಗೆ ಹನಿ ನೀರಾವರಿ ಪರಿಕರಗಳನ್ನು ನೀಡಲಾಗುತ್ತಿದೆ’ ಎಂದು ಆರೋಪ ಮಾಡಿದರು.

‘ರೈತರಿಗೆ ಸಿಗಬೇಕಾದ ಸವಲತ್ತು ನೀಡಿದರೆ ರೈತ ಆತ್ಮಹತ್ಯೆಯೂ ನಿಲ್ಲುತ್ತದೆ’ ಎಂದು ಹೇಳಿದರು.

ಭಾರತೀಯ ಕಿಸಾನ ನ್‌ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಹಿರೇಮಠ ಮಾತನಾಡಿ, ‘ಮೇ 29ರಂದು ಶಿವಾನಂದ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ರೈತರಿಗೆ ಒಂದು ದಿನದ ಅಭ್ಯಾಸ ವರ್ಗ ನಡೆಯಲಿದೆ. ಇದರಲ್ಲಿ ರೈತರಿಗೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.

ಲಕ್ಷ್ಮೇಶ್ವರ ತಾಲ್ಲೂಕು ಅಧ್ಯಕ್ಷ ಟಾಕಪ್ಪ ಸಾತ್ಪುತೆ ಮಾತನಾಡಿ, ‘ರಸಗೊಬ್ಬರ ಅಂಗಡಿಗಳಲ್ಲಿ ಒಂದು ಚೀಲ ಯೂರಿಯಾ ಪಡೆಯಲು ಮೂರು ಚೀಲ ಬೇರೆ ಲಿಂಕ್‌ ಗೊಬ್ಬರ ಪಡೆಯಬೇಕು. ಅದು ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಹಿಂದಿನ ಲಿಂಕ್ ಗೊಬ್ಬರ ರೈತರ ಮನೆಯಲ್ಲಿ ಹಾಗೇಯೇ ಇದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವಗೌಡ ನೀಲಪ್ಪಗೌಡ್ರ, ರೋಣ ತಾಲ್ಲೂಕು ಅಧ್ಯಕ್ಷ ಬಸನಗೌಡ ಪಾಟೀಲ, ಮುಂಡರಗಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹಾಲಪ್ಪ ಶಿವಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.