ಶಿರಹಟ್ಟಿ ಪಟ್ಟಣದಲ್ಲಿ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಪರಿಶಿಷ್ಟ ಜಾತಿ ಸಮುದಾಯಗಳು ಮಂಗಳವಾರ ತಲೆಬೋಳಿಸಿಕೊಂಡು, ಅರೆಬೆತ್ತಲೆ ಪ್ರತಿಭಟನೆ ನಡೆಸಿದರು
ಶಿರಹಟ್ಟಿ: ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಪರಿಶಿಷ್ಟ ಜಾತಿ ಸಮುದಾಯದವರು ಮಂಗಳವಾರ ತಲೆ ಬೋಳಿಸಿಕೊಂಡು, ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಸ್ಥಳೀಯ ಫಕೀರೇಶ್ವರ ಮಠದಿಂದ ಆರಂಭವಾದ ಪ್ರತಿಭಟನೆ ತಹಶೀಲ್ದಾರ್ ಕಚೇರಿ ತಲುಪಿದ ಬಳಿಕ ತಹಶೀಲ್ದಾರ್ ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ‘ಒಳಮೀಸಲಾತಿ ವರ್ಗೀಕರಣವು ಲಂಬಾಣಿ, ಕೊರಮ, ಕೊರಚ, ಭೋವಿ ಸಮುದಾಯಗಳ ಮರಣಶಾಸನವಾಗಿದೆ. ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯಗಳ ಕರಡು ಅಧಿಸೂಚನೆ ಮತ್ತು ನಾಗಮೋಹನ್‌ದಾಸ ವರದಿ ತಿರಸ್ಕರಿಸಬೇಕು. 63 ಜಾತಿಗಳನ್ನು ಒಂದುಗೂಡಿಸಿ ಕೇವಲ ಶೇ 6ರಷ್ಟು ಮೀಸಲಾತಿ ನೀಡಿದ್ದು ಖಂಡನೀಯ’ ಎಂದರು.
ಅವೈಜ್ಞಾನಿಕ ವರ್ಗೀಕರಣದಿಂದ ಬಂಜಾರ ಕೊರಮ, ಕೊರಚ, ಭೋವಿ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಕೊಲಂಬೋ ಸಮುದಾಯಗಳ ಜನಸಂಖ್ಯೆಯು ಹೆಚ್ಚಾಗಿದ್ದು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಸೌಲಭ್ಯಗಳಿಂದ ವಂಚಿತವಾಗಿವೆ. ಆದ್ದರಿಂದ ಸರ್ಕಾರ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಶೇ 7ರಷ್ಟು ಮೀಸಲಾತಿ ನೀಡಲೇಬೇಕು ಎಂದು ಆಗ್ರಹಿಸಿದರು.
ಈ ವೇಳೆ ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ ಸೇವಾಲಾಲ ಮಹಾರಾಜರು, ಕೊಟ್ಟರು ಬಂಜಾರ ಗುರುಪೀಠದ ಶಿವಪ್ರಕಾಶ ಮಹಾರಾಜರು, ಮಾಜಿ ಶಾಸಕ ರಾಮಣ್ಣ ಲಮಾಣಿ, ದೀಪಕ ಲಮಾಣಿ, ರಾಮಣ್ಣ ಲಮಾಣಿ ಮಾತನಾಡಿದರು.
ಸಮಾಜದ ಮುಖಂಡ ಜಾನು ಲಮಾಣಿ, ದೇವಪ್ಪ ಲಮಾಣಿ, ಗುರಪ್ಪ ಲಮಾಣಿ, ಈರಣ್ಣ ಚವ್ಹಾಣ, ಶಿವಣ್ಣ ಪುಂಡಲೀಕ, ಮಹೇಶ ಲಮಾಣಿ, ಥಾವರೆಪ್ಪ ಲಮಾಣಿ, ಸಂತೋಷ ಲಮಾಣಿ, ಕಾಶಪ್ಪ ಲಮಾಣಿ, ರಮೇಶ ಲಮಾಣಿ, ಕಾಳಪ್ಪ ಲಮಾಣಿ ಸೇರಿದಂತೆ ಬಂಜಾರ, ಕೊರಮ, ಕೊರಚ, ಭೋವಿ ಸಮುದಾಯದವರು ಇದ್ದರು.
ಪರಿಶಿಷ್ಟ ಜಾತಿಗಳನ್ನು ತುಳಿಯುವ ಪ್ರಯತ್ನ: ಕಿಡಿ
ಪರಿಶಿಷ್ಟ ಜಾತಿ ಸಮೀಕ್ಷೆ ವೇಳೆ ಲಂಬಾಣಿ ಸಮುದಾಯದ ಜನರು ನೆರೆ ರಾಜ್ಯಗಳಿಗೆ ವಲಸೆ ಹೋದ ಕಾರಣ ಈ ಸಮೀಕ್ಷೆಯಿಂದ ಹೊರ ಉಳಿದಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಕೆಲವು ಕಡೆ ಆದಿ ಆಂಧ್ರ ಆದಿ ದ್ರಾವಿಡ ಆದಿ ಕರ್ನಾಟಕ ಎಂದು ತಪ್ಪಾಗಿ ನಮೂದಿಸುವ ಮೂಲಕ ಪರಿಶಿಷ್ಟ ಜಾತಿಗಳನ್ನು ತುಳಿಯುವ ಪ್ರಯತ್ನ ಸರ್ಕಾರದಿಂದ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.