ADVERTISEMENT

ಶಾಲೆಗೆ ಹೋಗಲು ನಿತ್ಯ 10 ಕಿ.ಮೀ. ನಡಿಗೆ: ಬಸ್ ಸಂಚಾರಕ್ಕೆ ಆಗ್ರಹ

ಮುಂಡರಗಿ: ಬಸ್ ಸಂಚಾರ ಆರಂಭಕ್ಕೆ ವಿದ್ಯಾರ್ಥಿಗಳ ಆಗ್ರಹ

ಕಾಶಿನಾಥ ಬಿಳಿಮಗ್ಗದ
Published 31 ಆಗಸ್ಟ್ 2021, 20:35 IST
Last Updated 31 ಆಗಸ್ಟ್ 2021, 20:35 IST
ಮುಂಡರಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಎಕ್ಲಾಸಪುರ ಗ್ರಾಮದ ಶಾಲೆಗೆ ನಡೆದುಕೊಂಡು ಬರುತ್ತಿರುವ ವಿದ್ಯಾರ್ಥಿಗಳು
ಮುಂಡರಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಎಕ್ಲಾಸಪುರ ಗ್ರಾಮದ ಶಾಲೆಗೆ ನಡೆದುಕೊಂಡು ಬರುತ್ತಿರುವ ವಿದ್ಯಾರ್ಥಿಗಳು   

ಮುಂಡರಗಿ (ಗದಗ ಜಿಲ್ಲೆ): ಗದಗದಿಂದ ಡಂಬಳ, ಮೇವುಂಡಿ ಮಾರ್ಗವಾಗಿ ತಾಲ್ಲೂಕಿನ ಎಕ್ಲಾಸಪುರ ಗ್ರಾಮಕ್ಕೆ ಬರುತ್ತಿದ್ದ ಬಸ್ ಸಂಚಾರವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸ್ಥಗಿತಗೊಳಿಸಿರುವುದರಿಂದ ಎಕ್ಲಾಸಪುರ ಗ್ರಾಮದ ಸುತ್ತಮುತ್ತಲಿನ ಹಲವಾರು ವಿದ್ಯಾರ್ಥಿಗಳು ನಿತ್ಯ 10 ಕಿ.ಮೀ. ನಡೆದುಕೊಂಡೇ ಶಾಲೆಗೆ ಹೋಗಬೇಕಾಗಿದೆ.

ಲಾಕ್‍ಡೌನ್ ಸಮಯದಲ್ಲಿ ಗದುಗಿನಿಂದ ಎಕ್ಲಾಸಪುರ ಗ್ರಾಮಕ್ಕೆ ಬರುತ್ತಿದ್ದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಈಗ ಬಸ್ ಸಂಚಾರವನ್ನು ಮರಳಿ ಪ್ರಾರಂಭಿಸಿಲ್ಲ. ಎಕ್ಲಾಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಅಕ್ಕಪಕ್ಕದ ಹೈತಾಪುರ, ವೆಂಕಟಾಪುರ ಹಾಗೂ ಮತ್ತಿತರ ಗ್ರಾಮಗಳ ವಿದ್ಯಾರ್ಥಿಗಳು ಎಕ್ಲಾಸಪುರ ಶಾಲೆಗೆ ಬರುತ್ತಿದ್ದಾರೆ.

ಸರ್ಕಾರ ಇದೀಗ 9ನೇ ತರಗತಿಯಿಂದ ಶಾಲೆಗಳನ್ನು ಪ್ರಾರಂಭಿಸಿದ್ದು, ತರಗತಿಗಳು ಪ್ರಾರಂಭವಾಗಿವೆ. ಗದುಗಿನಿಂದ ಬಸ್ ಬಾರದೆ ಇರುವುದರಿಂದ ಅವರೆಲ್ಲ ಸುಮಾರು 10 ಕಿ.ಮೀ. ನಡೆದುಕೊಂಡು ಶಾಲೆಗೆ ಬರಬೇಕಾಗಿದೆ. ಮುಂಡರಗಿಯಿಂದ ಹಲವು ಬಸ್ಸುಗಳು ಬರುತ್ತಿವೆ. ಆದರೆ ಅವು ಶಾಲಾ ಸಮಯಕ್ಕೆ ಬರುವುದಿಲ್ಲ.

ADVERTISEMENT

'ಸಮಯಕ್ಕೆ ಸರಿಯಾಗಿ ಬಸ್ ಸಂಚಾರವಿಲ್ಲದ್ದರಿಂದ ಕೆಲವು ಗ್ರಾಮಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ತಕ್ಷಣ ಗದುಗಿನಿಂದ ಎಕ್ಲಾಸಪುರ ಗ್ರಾಮಕ್ಕೆ ಮೊದಲಿನಂತೆ ಬಸ್ ಸಂಚಾರವನ್ನು ಪ್ರಾರಂಭಿಸಬೇಕು' ಎನ್ನುತ್ತಾರೆ ಆ ಗ್ರಾಮದ ಯುವ ಮುಖಂಡ ಮಹಾಂತೇಶ ಮುಗುಳಿ.

*
ಸಕಾಲದಲ್ಲಿ ಶಾಲೆಗೆ ತೆರಳಲು ಬಸ್ ಇಲ್ಲದ್ದರಿಂದ ನಿತ್ಯ ಸುಮಾರು 4 ಕಿ.ಮೀ. ನಡೆದು ಶಾಲೆಗೆ ಹೋಗಬೇಕಿದೆ. ಅರ್ಧ ಸಮಯವನ್ನು ರಸ್ತೆಯಲ್ಲಿಯೇ ಕಳೆಯುವಂತಾಗಿದೆ.
-ಸುದೀಪ ಹಲವಾಗಲಿ, ಹೈತಾಪುರ ಗ್ರಾಮದ ವಿದ್ಯಾರ್ಥಿ

**
ನಿಗದಿಯಂತೆ ಎಕ್ಲಾಸಪುರ ಗ್ರಾಮಕ್ಕೆ ಮುಂಜಾನೆ ಎರಡು ಬಸ್ಸುಗಳನ್ನು ಬಿಡಲಾಗುತ್ತದೆ. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಬಸ್ ಓಡಿಸಲು ಕ್ರಮ ಕೈಗೊಳ್ಳಲಾಗುವುದು
-ಎಸ್.ಡಿ.ಬಳೂಟಗಿ, ಘಟಕ ವ್ಯವಸ್ಥಾಪಕ, ಮುಂಡರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.