ಲಕ್ಷೇಶ್ವರ: 200 ವರ್ಷಗಳ ಹಿಂದೆ ಪಟ್ಟಣದಲ್ಲಿ ಮೀರಜ್ ಸಂಸ್ಥಾನದವರು ಮಣ್ಣಿನ ಕೋಟೆಯಲ್ಲಿ ಪ್ರತಿಷ್ಠಾಪಿಸಿದ್ದ ಕಿಟ್ಟದ ಗಣಪ ಇನ್ನು ಮುಂದೆ ಅನಾಥನಲ್ಲ. ವಕೀಲರ ಸಂಘದ ಕಚೇರಿಯಲ್ಲಿ ಕಿಟ್ಟದ ಗಣೇಶ ಸ್ಥಾಪಿಸಲು ಭರದ ಸಿದ್ಧತೆಗಳು ನಡೆದಿವೆ.
ಇತಿಹಾಸ: ಮೀರಜ್ ಸಂಸ್ಥಾನದ ಮಹಾರಾಜರು ಲಕ್ಷ್ಮೇಶ್ವರದಲ್ಲಿ ಆಳ್ವಿಕೆ ನಡೆಸುವ ಸಂದರ್ಭದಲ್ಲಿ ಮಣ್ಣಿನ ಕೋಟೆಯನ್ನೇ ತಮ್ಮ ಅರಮನೆಯನ್ನಾಗಿ ಮಾಡಿಕೊಂಡಿದ್ದ ಸಮಯದಲ್ಲಿ ಈ ಕಿಟ್ಟದ ಗಣಪನನ್ನು ಪ್ರತಿಷ್ಠಾಪನೆ ಮಾಡಿದ್ದರು ಎಂದು ಇತಿಹಾಸ ಹೇಳುತ್ತದೆ.
ವಿಶೇಷ: ಹುಣಸೆ ಬೀಜದ ಹಿಟ್ಟು, ಮೀನಸೆರಿ, ಆಕಳ ಸಗಣಿ ಹಾಗೂ ಕಟ್ಟಿಗೆ ಪುಡಿಯಿಂದ ಈ ಗಣಪನನ್ನು ಕಲಾವಿದ ಅತ್ಯಂತ ನಾಜೂಕಾಗಿ ತಯಾರಿಸಿದ್ದಾನೆ. ನೂರಾರು ವರ್ಷ ಹಳೆಯದಾದರೂ ಸಹ ಇಂದಿಗೂ ಮೂರ್ತಿ ತನ್ನ ಅಂದವನ್ನು ಉಳಿಸಿಕೊಂಡಿರುವುದೇ ಇದರ ವಿಶೇಷ.
ಸಂಸ್ಥಾನಿಕರ ಆಡಳಿತ ಅಂತ್ಯಗೊಂಡ ಬಳಿಕ ಕಟ್ಟಡದಲ್ಲಿ ನ್ಯಾಯಾಲಯ ಸ್ಥಾಪನೆಗೊಂಡಿತು. ಅಂದಿನಿಂದ ಗಣಪತಿಯ ಪೂಜೆ ನ್ಯಾಯಾಲಯದ ಸುಪರ್ದಿಗೆ ಬಂದಿತು. ದಿನಾಲೂ ನ್ಯಾಯಾಲಯದ ಸಿಬ್ಬಂದಿ ಗಣಪತಿಗೆ ಪೂಜೆ ಸಲ್ಲಿಸಿ ದೀಪ ಬೆಳಗಿಸುತ್ತಿದ್ದರು. ನ್ಯಾಯಾಧೀಶರು ಪ್ರತಿದಿನ ನ್ಯಾಯಾಲಯಕ್ಕೆ ಬಂದು ಗಣಪತಿಗೆ ನಮಸ್ಕರಿಸುತ್ತಿದ್ದರು. ಬೂಟು ಸಹ ಧರಿಸದೆ ಗಣಪತಿ ಮುಂದೆ ಕುಳಿತು ನ್ಯಾಯದಾನ ಮಾಡುತ್ತಿದ್ದುದು ಒಂದು ಇತಿಹಾಸ.
ನ್ಯಾಯಾಲಯ ಅಲ್ಲಿಂದ ಸ್ಥಳಾಂತರಗೊಂಡ ನಂತರ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಕಚೇರಿ ಸ್ಥಾಪನೆಯಾಯಿತು. ಕಂದಾಯ ಇಲಾಖೆಯೂ ಗಣಪತಿಯ ಪೂಜೆಯ ಜವಾಬ್ದಾರಿಯನ್ನು ಈವರೆಗೆ ನಿಭಾಯಿಸಿಕೊಂಡು ಬರುತ್ತಿದೆ. ಆದರೆ, ಸದ್ಯ ಮೂರ್ತಿ ಇರುವ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಹಾಗೇನಾದರೂ ಕಟ್ಟಡ ಬಿದ್ದು ಗಣಪತಿ ಮೂರ್ತಿಗೆ ಧಕ್ಕೆ ಆದರೆ ಊರಿಗೆ ಕೇಡು ಎಂದು ಸಾರ್ವಜನಿಕರು ನಂಬಿದ್ದಾರೆ. ಹೀಗಾಗಿ ಈಗಿರುವ ಕಿಟ್ಟದ ಗಣಪನ ಮೂರ್ತಿಯನ್ನು ವಕೀಲರ ಸಂಘದ ಕಚೇರಿಯಲ್ಲಿ ಸ್ಥಾಪಿಸಲು ವಕೀಲರು ನಿರ್ಧರಿಸಿದ್ದು ಒಳ್ಳೆ ವಿಚಾರವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿರಿಯ ವಕೀಲರಾದ ವಿ.ಎಲ್. ಪೂಜಾರ, ಆರ್.ಸಿ. ಪಾಟೀಲ, ಬಿ.ಎಸ್. ಘೋಂಗಡಿ, ಬಿ.ಎಸ್. ಪಾಟೀಲ, ಸಂಘದ ಹಿಂದಿನ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠರು ಮೂರ್ತಿಯನ್ನು ಸಂಘದ ಕಚೇರಿಯಲ್ಲಿ ಪ್ರತಿಷ್ಠಾಪಿಸಲು ಸಲಹೆ ನೀಡಿದ್ದಾರೆ. ಹೀಗಾಗಿ ಸಂಘದ ಈಗಿನ ಅಧ್ಯಕ್ಷರಾದ ಬಿ.ವಿ. ನೇಕಾರ ಅವರು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ.
–––
ಗಣಪ ಊರು ಕಾಯುವ ದೈವನಾಗಿದ್ದು ಸಧ್ಯ ಮೂರ್ತಿ ಇರುವ ಸ್ಥಳ ಶಿಥಿಲಗೊಂಡ ಕಾರಣ ವಕೀಲರ ಸಂಘದ ಕಚೇರಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ
–ಬಿ.ಎಸ್. ಬಾಳೇಶ್ವರಮಠ ವಕೀಲರ ಸಂಘದ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.