ನರೇಗಲ್: ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷ ಫಕೀರಪ್ಪ ಮಳ್ಳಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ವಿಶೇಷ ಸಾಮಾನ್ಯ ಸಭೆ ನಡೆಸಲಾಯಿತು.
ಸಭೆಯಲ್ಲಿ 15ನೇ ಹಣಕಾಸು ಹಾಗೂ ಎಸ್‌ಎಫ್‌ಸಿ ಯೋಜನೆ ಅಡಿಯಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೂತನ ಶಾಖೆಗೆ ಬಾಡಿಗೆ ನೀಡುವುದು ಹಾಗೂ ಖಾಸಗಿ ಮಾಲಿಕತ್ವದ ಬಡಾವಣೆಗಳಿಗೆ ಅಮೃತ 2.0 ಯೋಜನೆಯಡಿ ನಿರಂತರ ನೀರು ಪೂರೈಸುವ ಕುರಿತು ಚರ್ಚಿಸಲಾಯಿತು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲೂಎಸ್) ಕಾರ್ಯಪಾಲಕ ಅಭಿಯಂತರ ಜಗದೀಶ ಹೊಸಮನಿ ಮಾತನಾಡಿ, ‘ಪಟ್ಟಣದ 57ಕಿಮೀ ವ್ಯಾಪ್ತಿಯಲ್ಲಿ ನಳ ಜೋಡಣೆ ಮಾಡಲಾಗುತ್ತಿದ್ದು, ಈಗಾಗಲೇ ಶೇ 90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನೀರು ಪೂರೈಕೆಗೆ ಅಗತ್ಯವಿರುವ ಮೊತ್ತವನ್ನು ಪಟ್ಟಣ ಪಂಚಾಯಿತಿ ಸಂಗ್ರಹಿಸಿ ನೀಡಬೇಕಾಗುತ್ತದೆ. ಜಿಗಳೂರು ಕೆರೆಯಿಂದ ಬರುವ ನೀರು ಸಂಗ್ರಹಕ್ಕೆ ಟ್ಯಾಂಕ್ ಅಗತ್ಯವಿದ್ದು, ದುರಸ್ತಿ ಅನಿವಾರ್ಯವಿದೆ’ ಎಂದರು.
ಪಟ್ಟಣದ ಚರಂಡಿ ನೀರು ಹರಿದು ಹೋಗುವ ಮಾರ್ಗದ ವ್ಯಾಪ್ತಿಯಲ್ಲಿ ಅಂದಾಜು 4 ಎಕರೆ ಭೂಮಿ ನೀಡಿದರೆ ಚರಂಡಿ ನೀರು ಶುದ್ಧಿಕರಣ ಘಟಕ ಸ್ಥಾಪಿಸಲಾಗುತ್ತದೆ’ ಎಂದರು.
‘ಪಟ್ಟಣದಲ್ಲಿ 30 ವರ್ಷದಿಂದ ನೀರಿನ ತೆರಿಗೆ ಸಂಗ್ರಹ ಮಾಡಿಲ್ಲ. ಆದಕಾರಣ ಪರ್ಯಾಯ ಮಾರ್ಗವಾಗಿ ಅಂದಾಜು ತೆರಿಗೆ ಸಂಗ್ರಹಿಸಿ ಸಕ್ರಮಗೊಳಿಸಬೇಕು. ಹೊಸದಾಗಿ ಸಂಪರ್ಕ ಪಡೆಯುವವರಿಗೆ ನಿಯಮಗಳ ಅನುಸಾರ ತೆರಿಗೆ ಸಂಗ್ರಹಕ್ಕೆ ಮುಂದಾಗಬೇಕು’ ಎಂದು ಸದಸ್ಯ ದಾವುದ್ ಅಲಿ ಕುದರಿ ಸಲಹೆ ನೀಡಿದರು.
ಈ ವೇಳೆ ವರ್ಗಾವಣೆ ಹಾಗೂ ನಿವೃತ್ತರಾದ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ನೂಲ್ಕಿ, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಸದಸ್ಯರಾದ ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ರಾಚಯ್ಯ ಮಾಲಗಿತ್ತಿಮಠ, ಜ್ಯೋತಿ ಪಾಯಪ್ಪಗೌಡ್ರ, ಈರಪ್ಪ ಜೋಗಿ, ಸಕ್ರಪ್ಪ ಹಡಪದ, ಶೇಖಪ್ಪ ಕೆಂಗಾರ, ಗದಗ ಕೆಯುಡಬ್ಲೂಎಸ್ ಸಹಾಯಕ ಕಾರ್ಯಪಾಲಕ ಅಭಿಯಂತರ ಬಸವರಾಜ ಮಡಿವಾಳರ ಇದ್ದರು.
2001ರ ನಂತರ ನಿರ್ಮಾಣ ಮಾಡಲಾದ ನಿವೇಶನಗಳಿಗೆ ಮಾಲಿಕರೆ ಮೂಲಸ್ಔಲಭ್ಯ ಒದಗಿಸಬೇಕು. ಇಲ್ಲವಾದಲ್ಲಿ ಪರವಾನಿಗೆ ರದ್ದು ಪಡಿಸಬೇಕುಜಗದೀಶ ಹೊಸಮನಿ ಕೆಯುಡಬ್ಲೂಎಸ್ ಕಾರ್ಯಪಾಲಕ ಅಭಿಯಂತರ
ಹಂದಿಗಳನ್ನು ಸಾಗಿಸುವಂತೆ ಮಾಲಿಕರಿಗೆ ಎಚ್ಚರಿಕೆ
ನರೇಗಲ್ ಪಟ್ಟಣ ಹಾಗೂ ಸುತ್ತಮುತ್ತಲಿನ ಜಮೀನುಗಳಿಗೆ ಹಂದಿಗಳ ಹಾವಳಿ ಅತಿಯಾದ ಕಾರಣ ಮಾಲಿಕರಿಗೆ ಶನಿವಾರದ ಒಳಗೆ ಸೆರೆಹಿಡಿಯುವಂತೆ ಸೂಚಿಸಿದರು. ಇಲ್ಲವಾದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸದಸ್ಯರು ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ನಡೆದಿರುವ ವಿದ್ಯುತ್ ಕಂಬಗಳ ಸ್ಥಳಾಂತರ ದುರಸ್ತಿ ಕುರಿತು ಹಾಗೂ ಕಾಮಗಾರಿ ವೇಳೆ ಸ್ಥಳೀಯರಿಂದ ಆಗುತ್ತಿರುವ ಸಮಸ್ಯೆ ಕುರಿತು ಹೆಸ್ಕಾಂನ ಎಸ್‌ಒ ವಿರೂಪಾಕ್ಷಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.