ADVERTISEMENT

ಮಳೆ ಅಬ್ಬರಕ್ಕೆ ಗೋಡೆ ಕುಸಿತ: ವೃದ್ಧೆ ಸಾವು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 12:49 IST
Last Updated 14 ಅಕ್ಟೋಬರ್ 2020, 12:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗದಗ: ಜಿಲ್ಲೆಯ ವಿವಿಧೆಡೆ ಬುಧವಾರ ಮಳೆಯ ಅಬ್ಬರ ಜೋರಾಗಿತ್ತು. ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದಲ್ಲಿ ನಿರಂತರ ಮಳೆಗೆ ನೆನೆದಿದ್ದ ಮನೆಯ ಗೋಡೆ ಕುಸಿದುಬಿದ್ದು, ವೃದ್ಧೆಯೊಬ್ಬರು ಮಣ್ಣಿನಡಿ ಸಿಲುಕಿ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

ಗ್ರಾಮದ ಶಂಕ್ರವ್ವ ನಿಂಗನಗೌಡ ಭೀಮನಗೌಡ್ರ(70) ಮೃತರು. ಬೆಳಗ್ಗೆ ಬಹಿರ್ದೆಸೆಗೆ ಹೋಗಿ ಬರುವ ವೇಳೆ ಎದುರು ಮನೆ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ. ಅವರ ಬಳಿಯೇ ಇದ್ದ ಆಡು ಕೂಡ ಈ ಘಟನೆಯಲ್ಲಿ ಸಾವನ್ನಪ್ಪಿದೆ.

ಗದಗ ಬೆಟಗೇರಿ ಅವಳಿ ನಗರದಲ್ಲಿ ಬೆಳಿಗ್ಗೆ ಹಾಗೂ ಮಧ್ಯಾಹ್ನ ಬಿರುಸಿನ ಮಳೆ ಸುರಿಯಿತು.

ADVERTISEMENT

ನರೇಗಲ್‌ ಸಮೀಪದ ಅಬ್ಬಿಗೇರಿ ಗ್ರಾಮದ ಸವಡಿ ರಸ್ತೆಯ ಮಾರ್ಗದಲ್ಲಿರುವ ಎಸ್.ಸಿ.ಕಾಲೊನಿಯಲ್ಲಿ ಬೃಹತ್ ನೀಲಗಿರಿ ಮರವೊಂದು ಹಂಚಿನ ಮನೆಯ ಮೇಲೆ ಬುಧವಾರ ಬೆಳಿಗ್ಗೆ ಬಿದ್ದಿದೆ. ಜೀವ ಹಾನಿ ಆಗಿಲ್ಲ.

ಭಾರಿ ಮಳೆಗೆ ಮನೆ ಹಾಗೂ ಬೆಳೆ ಕಳೆದುಕೊಂಡ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಯಳವತ್ತಿ ಗ್ರಾಮಕ್ಕೆ ಬುಧವಾರ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಭೇಟಿ ನೀಡಿದ್ದರು. ಮಳೆಗೆ ಗ್ರಾಮದಲ್ಲಿ ಹತ್ತಾರು ಮನೆಗಳು ಬಿದ್ದಿವೆ. ಅಲ್ಲದೆ ಸಾಕಷ್ಟು ಬೆಳೆ ನಾಶವಾಗಿದೆ. ಕಾರಣ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಡಂಬಳ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರವೂ ಮಳೆ ಮುಂದುವರಿದಿದೆ. ಜಿಟಿ ಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.