ADVERTISEMENT

ಗಜೇಂದ್ರಗಡ: ನೀರಿದ್ದರೂ ನಿರ್ವಹಣೆ ಕೊರತೆ; ತಪ್ಪದ ತೊಂದರೆ

ಗಜೇಂದ್ರಗಡ ತಾಲ್ಲೂಕಿನಲ್ಲಿ ನೀರು ಪೂರೈಕೆ ವ್ಯವಸ್ಥೆ ಸರಿಪಡಿಸುವಂತೆ ಸಾರ್ವಜನಿಕರ ಆಗ್ರಹ

ಶ್ರೀಶೈಲ ಎಂ.ಕುಂಬಾರ
Published 2 ಮೇ 2025, 4:22 IST
Last Updated 2 ಮೇ 2025, 4:22 IST
ಗಜೇಂದ್ರಗಡದ ವಾಣಿಪೇಟೆಯಲ್ಲಿ ಮಹಿಳೆಯರು ಕುಡಿಯುವ ನೀರು ಹಿಡಿಯುತ್ತಿರುವುದು
ಗಜೇಂದ್ರಗಡದ ವಾಣಿಪೇಟೆಯಲ್ಲಿ ಮಹಿಳೆಯರು ಕುಡಿಯುವ ನೀರು ಹಿಡಿಯುತ್ತಿರುವುದು   

ಗಜೇಂದ್ರಗಡ: ಬೆಳಗಾವಿ ಜಿಲ್ಲೆಯ ನವೀಲುತೀರ್ಥ ಜಲಾಶಯದಿಂದ ರೋಣ ತಾಲ್ಲೂಕಿನ ಜಿಗಳೂರು ಕೆರೆಗೆ ಮಲಪ್ರಭೆ ನೀರು ಹರಿಸಲಾಗಿದ್ದು, ಅಲ್ಲಿಂದ ಗಜೇಂದ್ರಗಡ, ರೋಣ, ನರೇಗಲ್‌ ಪಟ್ಟಣ ಸೇರಿದಂತೆ 7 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ಪಟ್ಟಣದಲ್ಲಿ 15-20 ದಿನಗಳಿಗೆ ಪೂರೈಕೆಯಾಗುತ್ತಿದ್ದ ಕುಡಿಯುವ ನೀರು ಸದ್ಯ 4-5 ದಿನಗಳಿಗೊಮ್ಮೆ ಪೂರೈಕೆಯಾಗುತ್ತಿದೆ.

ಪೈಪ್‌ಲೈನ್‌, ವಾಟರ್‌ಮೆನ್‌ಗಳ ನಿರ್ವಹಣೆ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಗಳಿಗೆ ಪೂರೈಕೆಯಾಗುತ್ತಿರುವ ಮಲಪ್ರಭೆ ನದಿ ನೀರು ಪೂರೈಕೆಯಲ್ಲಿ ಆಗಾಗ ಸಮಸ್ಯೆ ಉಂಟಾಗುತ್ತಿದೆ.

ಪಟ್ಟಣದ ಕೆಳಗಲಪೇಟೆ, 15ನೇ ವಾರ್ಡ್‌, ಉಣಚಗೇರಿ ಗ್ರಾಮ (23ನೇ ವಾರ್ಡ್‌) ಸೇರಿದಂತೆ ವಿವಿಧೆಡೆ ತಾಂತ್ರಿಕ ಸಮಸ್ಯೆಯಿಂದ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ.

ADVERTISEMENT

ಹಳ್ಳಿಗಳಿಗೆ ಪೂರೈಕೆಯಾಗುವ ನೀರಿನ ಪೈಪ್‌ ಲೈನ್ ನರಗುಂದದಿಂದ ಪಟ್ಟಣದ ಸಮೀಪದ ಕಣವಿ ವೀರಭದ್ರೇಶ್ವರ ಗುಡ್ಡದವರೆಗೆ ಹಾಗೂ ಪಟ್ಟಣಕ್ಕೆ ಪೂರೈಕೆಯಾಗುವ ನೀರಿನ ಪೈಪ್‌ಲೈನ್‌ ಜಿಗಳೂರು ಕೆರೆಯಿಂದ ಪಟ್ಟಣದವರೆಗೆ ಇದ್ದು, ನೀರಿನ ಒತ್ತಡ ಹೆಚ್ಚು-ಕಡಿಮೆಯಾದಾಗ ಪೈಪ್‌ಗಳಲ್ಲಿ ಅಲ್ಲಲ್ಲಿ ನೀರು ಸೋರಿಕೆಯಾಗುತ್ತದೆ. ಸೋರಿಕೆ ಸಣ್ಣ ಪ್ರಮಾಣದಲ್ಲಿದ್ದಾಗ ದುರಸ್ತಿ ಮಾಡಿದರೆ ಅಷ್ಟೇನು ತೊಂದರೆಯಾಗುವುದಿಲ್ಲ. ಆದರೆ, ಅಧಿಕಾರಿಗಳು ಸೋರಿಕೆ ಹೆಚ್ಚಾದಾಗ ಮಾತ್ರ ಗಮನ ಹರಿಸುತ್ತಿದ್ದಾರೆ. ಇದರಿಂದಾಗಿ 3-4 ದಿನ ನೀರಿನ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಅಲ್ಲದೆ ಪೈಪ್‌ಲೈನ್‌ ಹಾದು ಹೋಗಿರುವ ಜಮೀನಿನಲ್ಲಿ ನೀರು ಹರಿದು ಬೆಳೆಗಳು ಹಾಳಾಗಿ ರೈತರಿಗೂ ಬಹಳಷ್ಟು ತೊಂದರೆಯಾಗುತ್ತಿದೆ.

ಅಸಮರ್ಪಕ ಪೂರೈಕೆ:

ತಾಲ್ಲೂಕಿನ ಗೋಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಟರಂಗಿ ಗ್ರಾಮಕ್ಕೆ ಕಳೆದ ಒಂದೂವರೆ ವರ್ಷದಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಟ್ಯಾಂಕ್‌ನಿಂದ ಗ್ರಾಮಕ್ಕೆ ತಲುಪುವ ಪೈಪ್‌ಗೆ ನಾಗರಸಕೊಪ್ಪ ತಾಂಡಾದಲ್ಲಿ ವಾಲ್‌ ಅಳವಡಿಸಲಾಗಿದೆ. ಅಲ್ಲಿ ಕೆಲವರು ವಾಲ್‌ ನಿಯಂತ್ರಣ ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಸಮೀಪದ ಲಕ್ಕಲಕಟ್ಟಿ ಗ್ರಾಮದ ಕೆಲ ಓಣಿಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಲ್ಲೂಕಿನ ಸೂಡಿ, ಮುಶಿಗೇರಿ, ನೆಲ್ಲೂರ, ಲಕ್ಕಲಕಟ್ಟಿ, ನಾಗೇಂದ್ರಗಡ, ಕಲ್ಲಿಗನೂರ, ಬೇವಿನಕಟ್ಟಿ, ರಾಜೂರು, ದಿಂಡೂರು, ಕಾಲಕಾಲೇಶ್ವರ, ಬೈರಾಪೂರ, ಜಿಗೇರಿ, ರಾಮಾಪುರ, ಹಿರೇಕೊಪ್ಪ, ಕುಂಟೋಜಿ, ಗೊಗೇರಿ ಸೇರಿದಂತೆ 33 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ (ಡಿಬಿಒಟಿ) ನವಿಲು ತೀರ್ಥದ ಮಲಪ್ರಭಾ ನದಿ ನೀರು ಪೂರೈಕೆಯಾಗುತ್ತಿದೆ. ದಿಂಡೂರು, ರಾಜೂರು, ಕಾಲಕಾಲೇಶ್ವರ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ನಿಯಂತ್ರಣ ಕೊಠಡಿಯಿಂದ ಸಮೀಪದ ಕಣವಿ ವೀರಭದ್ರೇಶ್ವರ ಬೆಟ್ಟದ ಮೇಲೆ 4 ಲಕ್ಷ ಲೀಟರ್‌ ಸಾಮರ್ಥ್ಯದ ಎರಡು ಬೃಹತ್ ಟ್ಯಾಂಕ್‌ಗಳಿಗೆ ನೀರು ಸಂಗ್ರಹಿಸಿ, ಅಲ್ಲಿಂದ ಜನಸಂಖ್ಯೆಗೆ ಅನುಗುಣವಾಗಿ ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಸಣ್ಣ-ಪುಟ್ಟ ಹಳ್ಳಿಗಳಲ್ಲಿ ಪ್ರತಿದಿನ ಕುಡಿಯುವ ನೀರು ಪೂರೈಕೆಯಾದರೆ, ದೊಡ್ಡ ಹಳ್ಳಿಗಳಲ್ಲಿ ಒಂದೊಂದು ಓಣಿಗೆ 3-4 ದಿನಗಳಿಗೊಮ್ಮೆ ಪೂರೈಸಲಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.

ಗಜೇಂದ್ರಗಡ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಗಳಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಮೇ.15ರ ವರೆಗೆ ಪೂರೈಕೆಯಾಗುವಷ್ಟು ಕುಡಿಯುವ ನೀರು ಇದೆ
ಕಿರಣಕುಮಾರ ಕುಲಕರ್ಣಿ ತಹಶೀಲ್ದಾರ್ ಗಜೇಂದ್ರಗಡ
ಲಕ್ಕಲಕಟ್ಟಿ ಗ್ರಾಮದ ಒಂದನೇ ವಾರ್ಡ್‌ನಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಒಂದು ಗಂಟೆ ನೀರು ಬಿಟ್ಟರೆ 2-3 ಕೊಡ ನೀರು ಮಾತ್ರ ಸಿಗುತ್ತಿವೆ. ಈ ಕುರಿತು ಗ್ರಾಮ ಪಂಚಾಯಿತಿಯವರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ
ಮಲ್ಲಪ್ಪ ಕೊಪ್ಪದ ಗ್ರಾಮಸ್ಥ ಲಕ್ಕಲಕಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.