ADVERTISEMENT

ವಿಶ್ವ ಯೋಗಕ್ಕೆ ಶಿರೋಳದ ಕಿರೀಟ.!

ವಿಯಟ್ನಾಂನಲ್ಲಿ ತರಬೇತಿ ನೀಡುತ್ತಿರುವ ನರಗುಂದದ ಯೋಗ ಪಟುಗಳು

ಬಸವರಾಜ ಹಲಕುರ್ಕಿ
Published 20 ಜೂನ್ 2019, 19:30 IST
Last Updated 20 ಜೂನ್ 2019, 19:30 IST
ವಿಯಟ್ನಾಂನಲ್ಲಿ ಯೋಗ ತರಬೇತಿ ನೀಡುತ್ತಿರುವ ನರಗುಂದ ತಾಲ್ಲೂಕಿನ ಶಿರೋಳದ ಸೌಮ್ಯ ಕೊಣ್ಣೂರು
ವಿಯಟ್ನಾಂನಲ್ಲಿ ಯೋಗ ತರಬೇತಿ ನೀಡುತ್ತಿರುವ ನರಗುಂದ ತಾಲ್ಲೂಕಿನ ಶಿರೋಳದ ಸೌಮ್ಯ ಕೊಣ್ಣೂರು   

ನರಗುಂದ: ‘ಯೋಗ ತರಬೇತಿ ನೀಡಲು ನನಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ಇದಕ್ಕೆ ನನ್ನೂರು ಶಿರೋಳದ ಹಂಪಸಾಗರ ಮರಿದವರ ಸ್ಮಾರಕ ಯೋಗ ಹಾಗೂ ವ್ಯಾಯಾಮ ಪಾಠಶಾಲೆಯೇ ಕಾರಣ’.

ಅಂತರರಾಷ್ಟ್ರೀಯ ಯೋಗ ಪಟು, ಶಲಭಾಸನದಲ್ಲಿ ಗಿನ್ನೆಸ್‌ ದಾಖಲೆ ಮಾಡಿರುವ ಬಸವರಾಜ ಕೊಣ್ಣೂರ ಅವರ ಅಭಿಮಾನದ ಮಾತುಗಳಿವು.

ಅಂತರರಾಷ್ಟ್ರೀಯ ಮಟ್ಟದ ಯೋಗ ತರಬೇತುದಾರರನ್ನು ನಿರ್ಮಿಸಿದ ಹೆಗ್ಗಳಿಕೆ ಈ ಯೋಗ ಪಾಠಶಾಲೆಯದು.
ಗದಗ ಜಿಲ್ಲೆಯಲ್ಲಿ ನಿರಂತರ ಯೋಗ ತರಬೇತಿ ನೀಡುವ ಏಕೈಕ ಸಂಸ್ಥೆ ಇದು. ಕಳೆದ ಮೂರು ದಶಕಗಳಿಂದ ಯೋಗ ತರಬೇತಿಗೆ ಮೀಸಲಾದ ಈ ಸಂಸ್ಥೆಯಲ್ಲಿ ಇದುವರೆಗೆ ಸಾವಿರಾರು ಯೋಗಪಟುಗಳು ರೂಪುಗೊಂಡಿದ್ದಾರೆ. ಇದರಲ್ಲಿ 28ಕ್ಕೂ ಹೆಚ್ಚು ಯೋಗಪಟುಗಳು ವಿದೇಶದಲ್ಲಿ ತರಬೇತಿ ನೀಡುವ ಮೂಲಕ ವಿಶ್ವಮಾನ್ಯತೆ ಗಳಿಸಿದ್ದಾರೆ.

ADVERTISEMENT

ವಿಯಟ್ನಾಂ ದೇಶದಲ್ಲಿ ಯೋಗ ತರಬೇತುದಾರರಿಗೆ ಬೇಡಿಕೆ ಇದೆ. ಶಿರೋಳದಲ್ಲಿ ತರಬೇತುಗೊಂಡ 25ಕ್ಕೂ ಹೆಚ್ಚು ಯೋಗಪಟುಗಳು ವಿಯಟ್ನಾಂನ ಛಿಮಿನ್ ನಗರದಲ್ಲಿ ಅಲ್ಲಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುತ್ತಿದ್ದಾರೆ.

1984ರಲ್ಲಿ ಶಿರೋಳದ ವಿಜಯಾ ಬ್ಯಾಂಕ್‍ನಲ್ಲಿ ಸೇವೆಗೆ ಬಂದಿದ್ದ ಕೆ.ಎಸ್. ಪಲ್ಲೇದ ಅವರಿಂದ ಸ್ಥಾಪನೆಗೊಂಡ ಈ ಯೋಗ ಪಾಠ ಶಾಲೆ, ಗದುಗಿನ ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳು ಹಾಗೂ ಗುರುಬಸವ ಶ್ರೀಗಳ ಪೋಷಣೆಯೊಂದಿಗೆ ಬೆಳೆಯಿತು. ಆರಂಭದಲ್ಲಿ ರುದ್ರಪ್ಪ ಕೊಣ್ಣೂರ ಅವರು ಇಲ್ಲಿ ಯೋಗ ಶಿಕ್ಷಕರಾಗಿದ್ದರು. ನಂತರ ಬಸವರಾಜ ಕೊಣ್ಣೂರ ಇದನ್ನು ಮುಂದುವರಿಸಿದರು. ಈಗ ಶರಣಯ್ಯ ಹಿರೇಮಠ ಯೋಗ ಶಿಕ್ಷಕರಾಗಿದ್ದು ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಯೋಗ ವರ್ಗಗಳು ನಡೆಯುತ್ತಿವೆ. ಬಸವರಾಜ ಕೊಣ್ಣೂರು ಕಳೆದ 8 ವರ್ಷಗಳಿಂದ ವಿಯಟ್ನಾಂನಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಸ್ವಂತ ಆರ್‌ಬಿ ಯೋಗ ವರ್ಲ್ಡ್ ಸಂಸ್ಥೆ ಆರಂಭಿಸಿದ್ದಾರೆ.

ವಿಯಟ್ನಾಂನಲ್ಲಿ ತರಬೇತಿ ನೀಡುತ್ತಿರುವವರಲ್ಲಿ ಶಿರೋಳದ ಸೌಮ್ಯ ಕೊಣ್ಣೂರು, ಈರಣ್ಣ ಕವಡಿಮಟ್ಟಿ, ಸಂಗು ಸನ್ನತಮ್ಮನವರ, ಅಜಯ ಕುಪ್ಪಸ್ತ, ಶರಣಪ್ಪ ಕೊಣ್ಣೂರು, ವಿಜಯ ಮುದೇನಗುಡಿ, ಪ್ರವೀಣ ಗಡ್ಡಿ, ಉಮೇಶ ಕಬನೂರ, ನವನೀತ ತ್ರಿವೇದಿ, ಬಾಬುಜಾನ್ ನೀಲಗುಂದ, ಬಸವರಾಜ ನಾಗಲೋಟಮಠ, ಮಲ್ಲಿಕಾರ್ಜುನ ಕೋಡಬಳಿ, ಈರಣ್ಣ ಹೊದ್ಲೂರ, ವಿನೋದ ಹೊಂಗಲ, ಶಿವು ಕೋಡಬಳಿ, ನಾಗರಾಜ ಹುನಸಿಮರದ ಪ್ರಮುಖರಾಗಿದ್ದಾರೆ.' ಯೋಗ ತರಬೇತಿ ನೀಡುತ್ತಿರುವ ಪ್ರತಿಯೊಬ್ಬರು ತಿಂಗಳಿಗೆ ₹80 ಸಾವಿರದಿಂದ ₹1 ಲಕ್ಷದವರೆಗೆ ವೇತನ ಪಡೆಯುತ್ತಿದ್ದಾರೆ.

ಶಿರೋಳದ ಯೋಗ ಶಾಲೆಯಲ್ಲಿ ತರಬೇತಿ ಪಡೆದವರು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪೆಪಡೆಯುತ್ತಿರುವುದು ವಿಶೇಷ. ಬಸವರಾಜ ಕೊಣ್ಣೂರು ಕಳೆದ ವರ್ಷ ಶಲಭಾಸನದಲ್ಲಿ ಗಿನ್ನೆಸ್‌ ದಾಖಲೆ ಮಾಡಿದ್ದಾರೆ. ಈಚೆಗೆ ವಿಶ್ವ ಮಟ್ಟದ ಯೋಗ ಪತಂಜಲಿ ಪ್ರಶಸ್ತಿ ಪಡೆದಿದ್ದಾರೆ. ಪತ್ನಿ ಸೌಮ್ಯ ಕೊಣ್ಣೂರು ವಿಯಟ್ನಾಂದಲ್ಲಿ ಮಹಿಳಾ ಯೋಗ ಸಂಸ್ಥೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.