ನರಗುಂದ: ‘ಯೋಗಪಟುಗಳೆಂದರೆ ಶಿರೋಳ, ಶಿರೋಳವೆಂದರೆ ಯೋಗಪಟುಗಳು’ ಎಂಬ ಮಾತು ಈಗ ಎಲ್ಲೆಡೆ ಜನಜನಿತವಾಗಿದೆ. ಇದಕ್ಕೆ ಸಾಕ್ಷಿಯಾಗಿ ಶಿರೋಳದ ಹಂಪಸಾಗರ ಪರ್ವತ ಮರಿದೇವರ ಯೋಗ, ವ್ಯಾಯಾಮ ಹಾಗೂ ಕ್ರೀಡಾಶಾಲೆಯಲ್ಲಿ ಯೋಗ ತರಬೇತಿ ಪಡೆದ ಶಿರೋಳದ 26 ಯೋಗಪಟುಗಳು ವಿಯಟ್ನಾಂ ದೇಶದ ವಿವಿಧ ನಗರಗಳಲ್ಲಿ ನಿತ್ಯ ಯೋಗ ತರಬೇತಿ ನೀಡುತ್ತಿದ್ದಾರೆ.
ಇವರಲ್ಲಿ ಮುಖ್ಯವಾಗಿ ಯೋಗದಲ್ಲಿ ಗಿನ್ನೆಸ್ ದಾಖಲೆ ಮಾಡಿದ ಬಸವರಾಜ ತಿಪ್ಪಣ್ಣ ಕೊಣ್ಣೂರ ಅವರು 12 ವರ್ಷಗಳಿಂದ ಪತ್ನಿ ಸೌಮ್ಯ ಅವರೊಂದಿಗೆ ಯೋಗ ತರಬೇತಿ ನೀಡುತ್ತಿರುವುದು ವಿಶೇಷವಾಗಿದೆ. ಬಸವರಾಜ ಅವರು ವಿಯಟ್ನಾಂನಲ್ಲಿ ನೆಲೆ ನಿಂತ ಮೇಲೆ ತಮ್ಮ ಸಹಪಾಠಿಗಳನ್ನು ಹಾಗೂ ಶಿಷ್ಯರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಯೋಗ ತರಬೇತುದಾರರನ್ನಾಗಿಸಿರುವುದು ಕರ್ನಾಟಕದ ಕೀರ್ತಿ ಮತ್ತಷ್ಟು ಹೆಚ್ಚಾಗಿದೆ.
ಶಿರೋಳದ ಯೋಗ ಗುರು ರುದ್ರಪ್ಪ ಕೊಣ್ಣೂರ ಅವರ ಗರಡಿಯಲ್ಲಿ ತರಬೇತಿ ಪಡೆದ ಯೋಗಪಟುಗಳು ವಿಯಟ್ನಾಂನ 5 ಮಹಾನಗರಗಳಲ್ಲಿ ಯೋಗ ತರಬೇತಿ ನೀಡುತ್ತಿರುವುದು ಭಾರತವು ಯೋಗಗುರು ಎಂಬುದಕ್ಕೆ ಸಾಕ್ಷಿಯಾಗಿದೆ. ವಿಯಟ್ನಾಂನ ಹೋಚಿಮಿನ್ ನಗರ ಒಂದರಲ್ಲಿಯೇ ಶಿರೋಳದ ಬಸವರಾಜ ಕೊಣ್ಣೂರ, ಪತ್ನಿ ಸೌಮ್ಯ ಕೊಣ್ಣೂರ ಸೇರಿದಂತೆ 19 ಯೋಗಪಟುಗಳು ತರಬೇತಿ ನೀಡಿದರೆ ಬಿನ್ಡಾಂಗ್, ಬೈನಹೋ, ಹಾನೋಯಿ, ವಾಂಗತೌ ನಗರಗಳಲ್ಲಿ ಏಳು ಮಂದಿ ತರಬೇತಿ ನೀಡುತ್ತಿದ್ದಾರೆ.
26 ಯೋಗಪಟುಗಳು: ಬಸವರಾಜ ಕೊಣ್ಣೂರ, ಸೌಮ್ಯ ಕೊಣ್ಣೂರ, ಶರಣಪ್ಪ ಕೊಣ್ಣೂರ, ಅಜಯ ಕುಪ್ಪಸ್ತ, ಶಿವು ಹಡಗಲಿ, ಈರಣ್ಣ ಕವಡಿಮಟ್ಟಿ, ಸಂಗಮೇಶ ಸಣ್ಣತಮ್ಮನವರ, ಮಲ್ಲು ಕೋಡಬಳಿ, ಶಿವು ಕೋಡಬಳಿ, ಬಸು ನಾಗಲೋಟಿಮಠ, ಉಮೇಶ್ ಕಬನೋರ, ನವನೀತ ತ್ರಿವೇದಿ, ವಿಜಯ ಮುದೇನಗುಡಿ, ಸುನಿಲ್ ಕಳಸದ, ಬಸು ಅಂಗಡಿ, ವಿನಯ ಸಪ್ಪಡ್ಲ, ಶಿವು ದಿಂಡಿ, ಈರಣ್ಣ ಹೊದ್ಲೂರ, ಕಿರಣ ಹೊದ್ಲೂರ, ಮಹಾಂತೇಶ ಮಾದರ, ವಿನೋದ ಹೊಂಗಲ, ದ್ಯಾಮಣ್ಣ ಮೇಗೂರ, ಶರಣು ಹುಣಸಿಮರದ, ಪ್ರವೀಣ ಗದ್ದಿ, ಬಾಬುಜಾನ್ ನೀಲಗುಂದ ಸೇರಿದಂತೆ 26 ಜನರು ವಿಯಾಟ್ನ್‌ಂನಲ್ಲಿ ಯೋಗ ಗುರುಗಳಾಗಿದ್ದಾರೆ.
ಮುಖ್ಯ ತರಬೇತುದಾರ ಬಸವರಾಜ: 12 ವರ್ಷಗಳಿಂದ ತರಬೇತುದಾರರಾಗಿರುವ ಬಸವರಾಜ ಕೊಣ್ಣೂರ 2018ರಲ್ಲಿ ಶಲಭಾಸನ ಯೋಗಪ್ರದರ್ಶನದಲ್ಲಿ ಗಿನ್ನೆಸ್ ದಾಖಲೆ ಮಾಡಿದ್ದು ವಿಶೇಷ. 300ಕ್ಕೂ ಹೆಚ್ಚು ಆಸನ ಪ್ರದರ್ಶಿಸುವ ಇವರು ಶಲಭಾಸನ ಕೌಂಡಿನ್ಯಾಸನ, ದ್ವಿಪಾದ ದಂಡಾಸನ, ಏಕಪಾದವಿಪರೀತ ದಂಡಾಸನ, ತ್ರಿಪುರಾಸನ, ತ್ರಿವಿಕ್ರಮಾಸನ, ಪದ್ಮಪಿಂಚವೃಶ್ಚಿಕಾಸನಗಳಲ್ಲಿ ಹೆಚ್ಚಿನ ಪರಿಣತಿ ಹೊಂದಿದ್ದು ಹೋಚಿಮಿನ್ ನಗರದಲ್ಲಿ ಜನಪ್ರಿಯ ಯೋಗ ತರಬೇತುದಾರರಾಗಿದ್ದಾರೆ.
‘ಯೋಗದಿಂದ ರೋಗ ದೂರ’
‘ಯೋಗದಿಂದ ರೋಗ ದೂರ ಎಂಬ ಮಂತ್ರವನ್ನು ವಿಯಟ್ನಾಂ ದೇಶ ಹೊಂದಿದೆ. ಇದರಿಂದ ಭಾರತಕ್ಕಿಂತಲೂ ಇಲ್ಲಿ ಯೋಗಕ್ಕೆ ಆದ್ಯತೆ ನೀಡುತ್ತಾರೆ. ಆದ್ದರಿಂದ ನಮ್ಮ ಶಿರೋಳದ ಗೆಳೆಯರ ಬಳಗ ಇಲ್ಲಿ ಕಳೆದ ದಶಕದಿಂದ ಯೋಗ ತರಬೇತಿ ನೀಡುವಲ್ಲಿ ನೆಲೆ ನಿಂತಿದೆ ಎನ್ನುತ್ತಾರೆ ಅಂತರರಾಷ್ಟ್ರೀಯ ಯೋಗ ತರಬೇತುದಾರ ಬಸವರಾಜ ಕೊಣ್ಣೂರ.
‘ಏಕಪಾದವಿಪರೀತ ದಂಡಾಸನದಿಂದ ಮಾನಸಿಕ ಏಕಾಗ್ರತೆ ಹೆಚ್ಚುತ್ತದೆ. ದೇಹದಲ್ಲಿನ ವಿಷಕಾರಕ ಅಂಶ ಹೊರಹೋಗುತ್ತದೆ. ಇದರ ಜತೆಗೆ ಕೌಂಡಿನ್ಯಾಸನ, ದ್ವಿಪಾದ ದಂಡಾಸನ ನಿತ್ಯ ಮಾಡಿದರೆ ಹೆಚ್ಚಿನ ಕಾಯಿಲೆಗಳು ದೂರವಾಗುತ್ತವೆ. ಭಾರತದಲ್ಲಿ ಯೋಗದಿನಕ್ಕೆ ಮಹತ್ವ ಕೊಡುವಂತೆ ನಿತ್ಯ ಯೋಗಾಭ್ಯಾಸಕ್ಕೆ ಮಹತ್ವ ನೀಡಬೇಕು’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.