ಹೊಳೆನರಸೀಪುರ: ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಸೋಮವಾರ ಏರ್ಪಡಿಸಿದ್ದ ಮುದ್ದೆ ಹಾಗೂ ಹುರುಳಿಸಾರು ಉಣ್ಣುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಹುಲಿವಾಲದ ರಾಮೇಗೌಡ 5 ನಿಮಿಷದಲ್ಲಿ 250 ಗ್ರಾಂ ತೂಕದ ಆರೂವರೆ (1,625 ಗ್ರಾಂ) ಮುದ್ದೆ ಮುರಿದು ಪ್ರಥಮ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಕಲ್ಲುಬ್ಯಾಡರಹಳ್ಳಿಯ ಪದ್ಮಾವತಿ 250 ಗ್ರಾಂ ತೂಕದ 6 ಮುದ್ದೆ (1,500 ಗ್ರಾಂ) ಉಂಡು ಮೊದಲಿಗರಾದರು. ತಲಾ ₹ 5 ಸಾವಿರ ನಗದು ಬಹುಮಾನ ಪಡೆದರು.
ಪಟ್ಟಣದ ವೈಷ್ಣವಿ ಚಾರಿಟಬಲ್ ಟ್ರಸ್ಟ್‌ಯಿಂದ ಏರ್ಪಡಿಸಿದ್ದ 5 ನಿಮಿಷ ರಾಗಿ ಮುದ್ದೆ, ಹುರಳಿಸಾರು ಬೆಣ್ಣೆಜೊತೆ ಊಟ ಮಾಡುವ ಸ್ಪರ್ಧೆ ಸಾರ್ವಜನಿಕರ ಆಸಕ್ತಿ ಕೆರಳಿಸಿತ್ತು. ಪ್ರತ್ಯೇಕ ನಡೆದ ಸ್ಪರ್ಧೆಯಲ್ಲಿ 6 ಜನ ಪುರುಷರು 8 ಜನ ಮಹಿಳೆಯರು ಭಾಗವಹಿಸಿದ್ದರು.
ಹುಚ್ಚನಕೊಪ್ಪಲು ಮಹೇಶ ಐದೂವರೆ ಮುದ್ದೆ ಉಂಡು ದ್ವಿತೀಯ ಬಹುಮಾನ ಗಳಿಸಿದರು. ಪಟ್ಟಣದ ವಿನುತಾ 4 ಮುದ್ದೆ ಉಂಡು ದ್ವಿತೀಯ ಬಹುಮಾನ ಗಳಿಸಿ ₹ 3 ಸಾವಿರ ಪಡೆದರು.
ಮೊದಲೆರೆಡು ಸ್ಥಾನ ಪಡೆದ ಮಹಿಳೆಯರಿಗೆ ನಗದು ಜೊತೆಗೆ ರೇಣುಕೇಶ್ ಸೀರೆಗಳನ್ನು ಬಹುಮಾನವಾಗಿ ನೀಡಿದರು.
ಟ್ರಸ್ಟಿನ ಕಿಟ್ಟಿ, ಕಾಮಾಕ್ಷಿ, ಸುದರ್ಶನ್ ಬಾಬು, ಅಶೋಕ್, ಈಶ್ವರ್, ಹರಿಣಾಕ್ಷಿ, ಕುಮುದಾ, ಮಂಜುಳಾ, ರವೀಶ, ಲಕ್ಷ್ಮೀ ಇತರರು ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.