
ಕೊಣನೂರು: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅನುಸರಿಸುವವರು, ಬೂಟಾಟಿಕೆ ಬಿಟ್ಟು ಶಿಕ್ಷಣದ ಮೂಲಕ ಅವರ ಆಶೋತ್ತರಗಳನ್ನು ಈಡೇರಿಸುವ ಸಂಕಲ್ಪ ಮಾಡಬೇಕು ಎಂದು ಅಕ್ಕ ಐಎಎಸ್ ಅಕಾಡೆಮಿಯ ಡಾ. ಶಿವಕುಮಾರ್ ಸಲಹೆ ನೀಡಿದರು.
ರಾಮನಾಥಪುರ ಹೋಬಳಿಯ ಬಿಳಗೂಲಿ ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಿಮ್ಮ ವಿದ್ಯೆಯು ನಿಮಗೆ ಗೌರವ ತಂದುಕೊಡುತ್ತದೆ. ವ್ಯಕ್ತಿತ್ವ ಮತ್ತು ನಡವಳಿಕೆಗಳು ನಿಮ್ಮ ಗೌರವ ಹೆಚ್ಚಿಸುತ್ತವೆ. ಅಂಬೇಡ್ಕರ್ ಪುತ್ಥಳಿಯ ಸ್ಥಾಪನೆಯು ಮುಖ್ಯವಾಗದೇ ಅವರ ಆಶೋತ್ತರಗಳನ್ನು ಈಡೇರಿಸುವ ಗುರಿಯು ನಿಮ್ಮದಾಗಬೇಕಿದೆ’ ಎಂದು ಸಲಹೆ ನೀಡಿದರು.
‘ಅಂಬೇಡ್ಕರ್ ಅವರಿಗೆ ನೀಡುವ ಗೌರವ ಪ್ರದರ್ಶನಕ್ಕಷ್ಟೇ ಇರದೇ, ನಿಮ್ಮ ಊರು–ಕೇರಿಗಳ ಮಕ್ಕಳಿಗೆ ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿ. ಶಿಕ್ಷಣ ಒದಗಿಸಿ ತಮಗೆ ಬೇಕಾದ್ದನ್ನು ಸ್ವತಃ ಪಡೆದುಕೊಳ್ಳುವ ಶಕ್ತಿಯನ್ನು ತುಂಬಬೇಕು’ ಎಂದು ಕಿವಿಮಾತು ಹೇಳಿದರು.
ಪ್ರತಿಮೆ ಅನಾವರಣಗೊಳಿಸಿದ ಶಾಸಕ ಎ.ಮಂಜು, ‘ವಿದ್ಯೆಯಿಂದ ಬದಲಾವಣೆ ಸಾಧ್ಯ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿ. ನಾನು ವಿದ್ಯಾರ್ಥಿ ದಿಸೆಯಿಂದಲೂ ರಾಜಕಾರಣಕ್ಕೆ ಬರುವ ಅವಕಾಶ ಮಾಡಿಕೊಟ್ಟಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಮತ್ತು ನಾಯಕರು. ಬಹಳ ವರ್ಷಗಳ ಹಿಂದೆಯೇ ವಿದ್ಯೆ ಮತ್ತು ಜ್ಞಾನದ ಮೂಲಕ ಪ್ರಪಂಚದಲ್ಲೇ ಶ್ರೇಷ್ಠ ವ್ಯಕ್ತಿಯಾಗಿ ಬೆಳೆಯಬಹುದು ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಅಂಬೇಡ್ಕರ್’ ಎಂದರು.
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಚನ್ನಕೇಶವ ಮಾತನಾಡಿದರು. ಗ್ರೇಡ್–2 ತಹಶೀಲ್ದಾರ್ ಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವಿಷ್ಣುಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವನಕುಮಾರಿ, ದಲಿತ ಸಂಘರ್ಷ ಸಮಿತಿಯಿ ರಾಜ್ಯ ಸಂಚಾಲಕ ಈರೇಶ್ ಹಿರೇಹಳ್ಳಿ, ಬಿಎಸ್ಪಿ ರಾಜ್ಯ ಘಟಕದ ಕಾರ್ಯದರ್ಶಿ ಅತ್ನಿ ಹರೀಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿದ್ಧಯ್ಯ, ಸದಸ್ಯರು, ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.
ರಾಮನಾಥಪುರ ಕಾವೇರಿ ನದಿಯಿಂದ ಕಳಶ ಹೊತ್ತು ತಂದ ಮಹಿಳೆಯರು | ಬೆಳ್ಳಿ ರಥದ ಬಿಳಗೂಲಿವರೆಗೆ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ
ಜ್ಞಾನ ಮತ್ತು ನಡತೆ ಸ್ವಚ್ಛವಾಗಿದ್ದಲ್ಲಿ ಶ್ರೇಷ್ಠ ವ್ಯಕ್ತಿ ಆಗುವುದರಲ್ಲಿ ಅನುಮಾನವಿಲ್ಲ. ನಿಮ್ಮಿಷ್ಟದ ಬದುಕು ಪಡೆಯಲು ಅನುಭವಿಸಲು ವಿದ್ಯೆ ಪ್ರಮುಖ ಸಾಧನಕೆ.ಎಂ. ಜಾನಕಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ
ನಮ್ಮ ಊರಿನಲ್ಲಿ ಡಾ. ಅಂಬೇಡ್ಕರ್ ಪುತ್ಥಳಿ ಅನಾವರಣ ಅಂತಿಮವಲ್ಲ. ನಮ್ಮ ಸಮುದಾಯವನ್ನು ಮುಖ್ಯ ವಾಹಿನಿಗೆ ತರುವ ಸವಾಲು ನಮ್ಮ ಮುಂದಿದೆಮಹೇಶ್ ಬಿ.ಆರ್. ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.