ಹಿರೀಸಾವೆ: ಸುಣ್ಣ-ಬಣ್ಣ, ಸ್ವಚ್ಛತೆ ಎಂಬುದು ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಇರುವುದಿಲ್ಲ. ಇದನ್ನು ಅರಿತು ಬೆಂಗಳೂರಿನ ಅವ್ಯಂಗ್ ಫೌಂಡೇಶನ್ ಮತ್ತು ರಂಗ್ 4 ಎ ಕಾಸ್ ಸಂಸ್ಥೆಯ 20 ಕಲಾವಿದರು, ಹೋಬಳಿಯ ಯಾಳನಹಳ್ಳಿ ಸರ್ಕಾರಿ ಶಾಲೆಗೆ ಬಣ್ಣ, ಬಣ್ಣದ ಚಿತ್ರಗಳನ್ನು ಬರೆದು ರಂಗು ತುಂಬಿದ್ದಾರೆ.
ಬೆಂಗಳೂರಿನ ವಿವಿಧ ಕೆಲಸಗಳನ್ನು ಮಾಡುತ್ತಿರುವ ಯುವಕರು ತಂಡವು ಶನಿವಾರ ಮತ್ತು ಭಾನುವಾರ ಈ ಕಾರ್ಯದಲ್ಲಿ ತೊಡಗಿತ್ತು. ಅಂಗನವಾಡಿ ಸೇರಿ ಶಾಲೆಯು ಮೂರು ಕಟ್ಟಡಗಳಿದ್ದು, ಗೋಡೆಗಳಿಗೆ, ಕಿಟಕಿ ಹಾಗೂ ಬಾಗಿಲುಗಳಿಗೆ ಬಣ್ಣ ಬಳಿದರು.
ನಂತರ ಕಲಾವಿದರು ಗೋಡೆಗಳ ಮೇಲೆ ವಿವಿಧ ಮಾದರಿಯ ಕನ್ನಡ, ಇಂಗ್ಲಿಷ್ ಅಕ್ಷರಗಳ ಹಲವು ಮಾದರಿಯ ಚಿತ್ರಗಳು, ಗಣಿತದ ಅಂಕಿ ಅಂಶಗಳು, ಪರಿಸರದಲ್ಲಿನ ಗಿಡ– ಮರ, ಪ್ರಾಣಿಗಳು, ವಿಜ್ಞಾನದಲ್ಲಿನ ವಿಷಯಗಳು, ಇತಿಹಾಸವನ್ನು ತಿಳಿಸುವ ಹಂಪಿ ಕಲ್ಲಿನ ರಥ, ಕೆಂಪೇಗೌಡರ ಚಿತ್ರಗಳು ಸೇರಿದಂತೆ ಭಾರತಿಯ ಸಂಸ್ಕೃತಿ ಜಾನಪದ ನೃತ್ಯಗಳು, ಮಾನವಿಯ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಹಲವು ಆಕರ್ಷಣೀಯ ಚಿತ್ರಗಳನ್ನು ಬರೆದು, ಬಣ್ಣ ತುಂಬಿದ್ದಾರೆ. ಈ ಶಾಲೆಯ ಹಿರಿಯ ವಿದ್ಯಾರ್ಥಿ ಶಿವಪ್ರಸಾದ್ ದ್ವಾರಕಿ ಬಣ್ಣವನ್ನು ನೀಡಿದ್ದಾರೆ. ಈ ಕಾರ್ಯಕ್ಕೆ ಗ್ರಾಮಸ್ಥರು ಸಹಕಾರ ಕೊಟ್ಟರು.
ಫೌಂಡೇಶನ್ ಸಂಸ್ಥಾಪಕಿ ಅಶ್ವಿನಿ ರಾಜನ್ ಮಾತನಾಡಿ, ‘ಸರ್ಕಾರಿ ಶಾಲೆಗಳ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. ಇದರ ಜೊತೆಯಲ್ಲಿ ನಿರ್ಗತಿಕರನ್ನು ಆರೈಕೆ ಮಾಡುವ ಕಾರ್ಯದಲ್ಲಿ ತೊಡಗಿದ್ದೇವೆ’ ಎಂದರು.
ಫೌಂಡೇಶನ್‌ನ ಸಹ ಸಂಸ್ಥಾಪಕಿ ಶ್ವೇತಾ, ನಿರ್ದೇಶಕ ಮಧು, ರಂಗ್ 4 ಎ ಕಾಸ್ ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರ, ಮುಖ್ಯಶಿಕ್ಷಕ ಶಾಂತಪ್ಪ, ಸಹಶಿಕ್ಷಕಿ ಶೃತಿ, ಎಸ್‌ಡಿಎಂಸಿ ಅಧ್ಯಕ್ಷೆ ಆಶಾ ದಿನೇಶ್ ಮತ್ತಿತರು ಕಲಾವಿದರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದರು.
ಈ ಎರಡು ಸಂಸ್ಥೆಯ ಸದಸ್ಯರು ರಜಾ ದಿನಗಳಲ್ಲಿ ರಾಜ್ಯದ ಹಲವು ಶಾಲೆಗಳಿಗೆ ಬಣ್ಣ ಬಳಿದು, ಚಿತ್ರಗಳನ್ನು ಬಿಡಿಸುವ ಕಾರ್ಯ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಕನ್ನಡ ಇಂಗ್ಲಿಷ್ ಮಾಧ್ಯಮದಲ್ಲಿ ಆನ್‌ಲೈನ್ ಬೋಧನೆ ಶಿಕ್ಷಣಕ್ಕೆ ಬೇಕಾದ ಸ್ಮಾರ್ಟ್ ಬೋರ್ಡ್ ಸೇರಿದಂತೆ ಮೂಲಸೌಲಭ್ಯ ಒದಗಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಉದ್ದೇಶ ನಮ್ಮದು.-ಮಧು ಅವ್ಯಂಗ್ ಫೌಂಡೇಶನ್ ನಿರ್ದೇಶಕ
ನಮ್ಮೂರ ಶಾಲೆಯ ಗೋಡೆಗಳಿಗೆ ಬಣ್ಣ ಬಳಿದು ವಿವಿಧ ಚಿತ್ರಗಳನ್ನು ಬರೆಯುವ ಮೂಲಕ ಆಕರ್ಷಣೀಯವಾದ ಕಟ್ಟಡ ಮಾಡಿದ್ದಾರೆ. ಗ್ರಾಮಸ್ಥರೂ ಸಹಕಾರ ನೀಡಿದ್ದೇವೆ.-ಮಂಜುನಾಥ್ ಯಾಳನಹಳ್ಳಿ, ಗ್ರಾ.ಪಂ. ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.