
ಬೇಲೂರು: ಕಾಫಿ ಬೆಳೆಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಶಾಸಕ ಎಚ್.ಕೆ. ಸುರೇಶ್ ಒತ್ತಾಯಿಸಿದರು.
ಇಲ್ಲಿನ ವೀರಶೈವ ಕಲ್ಯಾಣಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಬೆಳ್ಳಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕಾಫಿ ಬೆಳೆಗಾರರು, ಮಾನವ-ಪ್ರಾಣಿ ಸಂಘರ್ಷ ಎದುರಿಸುತ್ತಿದ್ದಾರೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಅಧಿವೇಶನದಲ್ಲಿ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಆದರೆ ಇಲ್ಲಿಯವರೆಗೂ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದರು.
ಮುತ್ತೋಡಿ ಅರಣ್ಯ ಪ್ರದೇಶದಲ್ಲಿ 2 ಸಾವಿರ ಎಕರೆಯಲ್ಲಿ ಆನೆಧಾಮ ನಿರ್ಮಿಸಿ ಆನೆಗಳನ್ನು ಸ್ಥಳಾಂತರ ಮಾಡುವುದಾಗಿ ಸಚಿವರು ಹೇಳುತ್ತಿದ್ದಾರೆಯೇ ಹೊರತು, ಅದು ಕಾರ್ಯರೂಪಕ್ಕೆ ಬಂದಿಲ್ಲ. ಕ್ಷೇತ್ರಕ್ಕೆ ಅರಣ್ಯ ಸಚಿವರೇ ಬಂದು ಸಮಸ್ಯೆಗಳ ಬಗ್ಗೆ ಗ್ರಹಿಸಿ ಹೋದರು. ಆದರೆ ನ್ಯೂನತೆಗಳು ಕಡಿಮೆಯಾಗಿಲ್ಲ. ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಮತ್ತೆ ಪ್ರಸ್ತಾಪಿಸುತ್ತೇನೆ ಎಂದರು.
2021ರಲ್ಲಿ ಅಂದಿನ ಕಂದಾಯ ಸಚಿವ ಆರ್.ಅಶೋಕ್ ಅವರು ಸರ್ಕಾರಿ ಭೂಮಿಯನ್ನು ಕಾಫಿ ಬೆಳೆಗಾರರಿಗೆ 30 ವರ್ಷಗಳ ಕಾಲ ಲೀಸ್‌ಗೆ ನೀಡುವುದಾಗಿ ಹೇಳಿದರು. ಅದನ್ನು ಜಾರಿಗೆ ತರುವಂತೆ ಈಗಿನ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಬಳಿ ವಿನಂತಿಸಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅದ್ದೂರಿ ಕುಮಾರ್ ಮಾತನಾಡಿ, ನಾವು ಭೂಮಿಯ ಒತ್ತುವರಿದಾರರಲ್ಲ. ಸಾಗುವಳಿದಾರರು ಈ ಬಗ್ಗೆ ಸರ್ಕಾರಕ್ಕೆ ತಪ್ಪು ಮಾಹಿತಿ ಹೋಗಬಾರದು. ಕಾಫಿ ಬೆಳೆಗಾರರು ಕಾಡಾನೆ, ಚಿರತೆ, ಕಾಡುಕೋಣ ಹಾಗೂ ಮಂಗಗಳ ಹಾವಳಿಯಿಂದ ಬೆಳೆ ಹಾನಿಗೆ ಒಳಗಾಗಿದ್ದು, ಜೀವಭಯದಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ಸಂಘವು 25 ವರ್ಷಗಳನ್ನು ಪೂರೈಸಿ ಮುನ್ನಡೆಸಲು ಕಾರಣರಾದ ಹಿಂದಿನ ಅಧ್ಯಕ್ಷರು ಮತ್ತು ಪ್ರಮುಖರನ್ನು ಸ್ಮರಿಸಿದರು.
ಕಾಫಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹಳಸೆ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಟಿ.ಪಿ. ಸುರೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್.ಪರಮೇಶ್, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕೌರಿ ಸಂಜಯ್, ಪ್ರಮುಖರಾದ ವೈ.ಎನ್.ಕೃಷ್ಣೇಗೌಡ, ಎಂ.ಆರ್.ಮಂಜುನಾಥ್, ತೊ.ಚ. ಅನಂತಸುಬ್ಬರಾಯ, ನವಿಲಹಳ್ಳಿ ವೆಂಕಟೇಶ್, ಎಂ.ಶಾರೀಬ್ ಫಾರ್ವಾನ್ ಇದ್ದರು. ಹಾಸನದ ಆಕಾಶವಾಣಿ ನಿವೃತ್ತ ಮುಖ್ಯಸ್ಥ ವಿಜಯ ಅಂಗಡಿ ನಿರೂಪಿಸಿದರು.
ಪಶ್ಚಿಮ ಘಟ್ಟದ ಪರಿಸರ ಅಸಮತೋಲನದಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತಿದೆ. ಕಾಫಿಯನ್ನು ಕೃಷಿ ಬೆಳೆ ಎಂದು ಪರಿಗಣಿಸುವುದರಿಂದ ಯಾವುದೇ ತೊಂದರೆ ಆಗುವುದಿಲ್ಲಬಿ.ಎಲ್.ಶಂಕರ್ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.