ADVERTISEMENT

ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಲಿ: ಶಾಸಕ ಕೆ.ಎಂ.ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 25 ಮೇ 2020, 11:04 IST
Last Updated 25 ಮೇ 2020, 11:04 IST
ಶಾಸಕ ಶಿವಲಿಂಗೇಗೌಡ
ಶಾಸಕ ಶಿವಲಿಂಗೇಗೌಡ   

ಅರಸೀಕೆರೆ: ಕೊಬ್ಬರಿ ಧಾರಣೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮರ್ಪಕ ಮಳೆಯೂ ಇಲ್ಲದೇ ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಿರುವ ಕಾರಣ ಅನುಕೂಲಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಬ್ಬರಿಯನ್ನು ಬೆಂಬಲ ಬೆಲೆಗೆ ಖರೀದಿಸಿ ರೈತರ ಆರ್ಥಿಕ ಸಬಲೀಕರಣಕ್ಕೆ ಮುಂದಾಗಬೇಕುಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಬ್ಬರಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಕೇವಲ ₹ 8,600 ರಿಂದ 9,000 ಬೆಲೆ ನಿಗದಿ ಮಾಡಲಾಗಿದೆ. ಇದರಿಂದ ರೈತರ ಆರ್ಥಿಕ ನಷ್ಟ ಭರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ಹಿಂದೆ ವಿಧಾನಸಭಾ ಅಧಿವೇಶನದಲ್ಲಿ ಸಚಿವ ಮಾಧುಸ್ವಾಮಿ ಹಾಗೂ ಸರ್ಕಾರ ಭರವಸೆ ನೀಡಿರುವಂತೆ ನಾಪೆಡ್ ಮೂಲಕ ಕೊಬ್ಬರಿಯನ್ನು ಕನಿಷ್ಠ ₹ 15 ಸಾವಿರ ಬೆಂಬಲ ಬೆಲೆಗೆ ಖರೀದಿಸಬೇಕು. ಕಳೆದ ವರ್ಷ ಇದೇ ಧಾರಣೆ ₹ 18 ಸಾವಿರ ಬೆಲೆ ನಿಗದಿಯಾಗಿತ್ತು. ಈ ಬಾರಿ ಕಳೆದ ವರ್ಷದ ಅರ್ಧದಷ್ಟೂ ಬೆಲೆ ನಿಗದಿಯಾಗಿಲ್ಲ. ಈ ರೀತಿಯಾದರೆ ರೈತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

‘ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಭೀತಿ ಹಾಗೂ ಲಾಕ್‌ಡೌನ್ ನಿಯಮಗಳು ಜಾರಿಯಲ್ಲಿವೆ ನಿಜ. ಆದರೆ. ಅದನ್ನೇ ಕಾರಣವಾಗಿಟ್ಟುಕೊಂಡು ರೈತರಿಗೆ ಅನ್ಯಾಯ ಮಾಡಬಾರದು. ರೈತರ ಬದುಕೂ ಸಾಗಬೇಕಿದೆ, ತಕ್ಷಣವೇ ಸರ್ಕಾರ ಕನಿಷ್ಠ ₹ 15 ಸಾವಿರ ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿ ಕೊಬ್ಬರಿ ಖರೀದಿಸಲು ಮುಂದಾಗಬೇಕು ಇಲ್ಲದಿದ್ದರೆ ರೈತರ ಪರವಾಗಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಮೇ 27ರಂದು ನಾನು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ರೈತರಿಗೆ ಅನುಕೂಲವಾಗುವಂತೆ ಕೊಬ್ಬರಿಯನ್ನು ಬೆಂಬಲ ಬೆಲೆಗೆ ಖರೀದಿಸಲು ಮನವಿ ಮಾಡಲಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ವಿಧಾನಸಭೆಯಲ್ಲಿ ಸರ್ಕಾರ ಕೊಟ್ಟ ಮಾತಿನಂತೆ ಕೊಬ್ಬರಿಯನ್ನು ಬೆಂಬಲ ಬೆಲೆಗೆ ಖರೀದಿಸದಿದ್ದರೆ ರೈತರೊಂದಿಗೆ ಸೇರಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

‘ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ತಪ್ಪಿಸಲು ಅಂತರ್ ರಾಜ್ಯಗಳಿಂದ ಬರುವವರನ್ನು ತಡೆಯಬೇಕು ಇಲ್ಲದಿದ್ದರೆ ಕೊರೊನಾ ಸಮುದಾಯಕ್ಕೆ ಹರಡಿ ಇಡೀ ರಾಜ್ಯಕ್ಕೇ ತೊಂದರೆಗೀಡು ಮಾಡಲಿದೆ ಎಂದು ಎಷ್ಟು ಹೇಳಿದರೂ ರಾಜ್ಯ ಸರ್ಕಾರ ಕಿವಿಗೊಡಲಿಲ್ಲ. ಈಗ ಕೊರೊನಾ ಇಡೀ ಹಾಸನ ಜಿಲ್ಲೆ ಮತ್ತು ರಾಜ್ಯಕ್ಕೆ ಒಕ್ಕರಿಸಿ ರಣಕೇಕೆ ಮೊಳಗಿಸುತ್ತಿದೆ. ಈಗಲೂ ಕಳ್ಳದಾರಿಗಳ ಮೂಲಕ ಅಕ್ರಮವಾಗಿ ನುಸುಳುತ್ತಿದ್ದಾರೆ. ಚೆಕ್ ಪೋಸ್ಟುಗಳನ್ನು ಎಷ್ಟೇ ಬಿಗಿಗೊಳಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.