ADVERTISEMENT

‘ಅನ್ಯರ ಜೇಬು ಸೇರುತ್ತಿದೆ ಅನುದಾನದ ಹಣ’: ಸಿಬಿಐ ತನಿಖೆಗೆ ಒತ್ತಾಯ

ಸಾವಿರಾರು ಕೋಟಿ ದುರ್ಬಳಕೆ ಆರೋಪ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 16:43 IST
Last Updated 25 ಡಿಸೆಂಬರ್ 2018, 16:43 IST
ಜಿ. ದೇವರಾಜೇಗೌಡ
ಜಿ. ದೇವರಾಜೇಗೌಡ   

ಹಾಸನ: ‘ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸಾವಿರ ಕೋಟಿ ರೂಪಾಯಿ ಅನುದಾನ ಉದ್ದೇಶಿತ ಕಾಮಗಾರಿಗಳಿಗೆ ವಿನಿಯೋಗ ಮಾಡದೇ ಗುತ್ತಿಗೆದಾರರ ಮೂಲಕ ಅನ್ಯರ ಜೇಬು ಸೇರುತ್ತಿದೆ. ಈ ಬಗ್ಗೆ ಸಿಬಿಐ ಅಥವಾ ಸುಪ್ರೀಂ ಕೋರ್ಟ್ ನಿವೃತ್ತ ನಾಯಾಧೀಶರಿಂದ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ಮುಖಂಡ ಜಿ. ದೇವರಾಜೇಗೌಡ ಆಗ್ರಹಿಸಿದರು.

‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಗೆ ಎರಡುವರೆ ಸಾವಿರ ಕೋಟಿಗೂ ಹೆಚ್ಚು ಅನುದಾನ ಮಂಜೂರು ಆಗಿದೆ. ಇದರಲ್ಲಿ ಸ್ವಲ್ಪ ಹಣ ಮಾತ್ರ ನಿಗದಿತ ಉದ್ದೇಶಕ್ಕೆ ವಿನಿಯೋಗುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಸಚಿವ ಎಚ್.ಡಿ.ರೇವಣ್ಣ ಕುಟುಂಬದವರು ತಾಲ್ಲೂಕಿನ ಗೌರಿಪುರದಲ್ಲಿ 59 ಎಕರೆ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಮುಖಂಡ ಎ.ಮಂಜು ಅಧಿಕಾರದಲ್ಲಿದ್ದಾಗ ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು.

ADVERTISEMENT

‘ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಕರೆಯಲಿ ಎಂಬ ಉದ್ದೇಶದಿಂದ ಜೆಡಿಎಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ರೇವಣ್ಣ ಹಾಗೂ ಎ.ಮಂಜು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ಕಿಡಿ ಕಾರಿದರು.

‘ಬಿ.ಎಂ. ರಸ್ತೆಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ತೆರವಿಗೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕೋರ್ಟ್‌ ಮೊರೆ ಹೋಗಲಾಗುವುದು’ ಎಂದು ಎಚ್ಚರಿಸಿದರು.

‘1996ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡ ಅವರು ಡಿನೋಟಿಫಿಕೇಷನ್ ಮೂಲಕ ಕೆರೆಯನ್ನು ವಿವಿಧ ಇಲಾಖೆಗಳಿಗೆ ಖಾತೆ ಮಾಡಿಕೊಟ್ಟರು. ಈ ರೀತಿ ಡಿನೋಟಿಫೈ ಆದ ಸರ್ಕಾರಿ ಜಾಗದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ಇರಬೇಕೆ ಹೊರತು ಕಲ್ಯಾಣ ಮಂಟಪವಲ್ಲ.

‘ಜನತಾ ಸೇವಾ ಟ್ರಸ್ಟ್’ ಹೆಸರಿಗೆ ಸರ್ವೆ ನಂ. 427 ರಲ್ಲಿ 5 ಎಕರೆ 19 ಗುಂಟೆ, ಆಡುವಳ್ಳಿ ಗ್ರಾಮದ ಸರ್ವೆ ನಂ. 88 ರಲ್ಲಿ 9 ಎಕರೆ 20 ಗುಂಟೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ. ರಾಜಕಾಲುವೆ ಮೇಲೆ ಕಟ್ಟಡ ನಿರ್ಮಿಸುವುದು ಶಿಕ್ಷಾರ್ಹ ಅಪರಾಧ. ಈ ಕಾಮಗಾರಿಗೆ ಅನುಮತಿ ನೀಡಿದ ಸಂಬಂಧಪಟ್ಟ ಅಧಿಕಾರಿಗಳನ್ನು ಜೈಲಿಗೆ ಕಳಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.