
ಚನ್ನರಾಯಪಟ್ಟಣ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್ ಜಿಲ್ಲಾ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿದೆ. ಕೆಲವರಿಗಷ್ಟೇ ಆದ್ಯತೆ ಕೊಡಲಾಗುತ್ತಿದ್ದು, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.
ಭಾನುವಾರ ರಾತ್ರಿ ಪಟ್ಟಣದಲ್ಲಿ ನಡೆದ ಅಸಮಾಧಾನಗೊಂಡಿರುವ ಮುಖಂಡರ ಸಭೆಯಲ್ಲಿ, ಕಾಂಗ್ರೆಸ್ ರಾಜ್ಯ ನಾಯಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರ ವಿರುದ್ಧವೂ ಆರೋಪಗಳು ಕೇಳಿ ಬಂದವು.
ಮುಖಂಡ ಎಚ್.ಕೆ. ಮಹೇಶ್ ಮಾತನಾಡಿ, ಇತ್ತೀಚೆಗೆ ಹಾಸನದ ಸಮೀಪ ಇರುವ ಗೆಂಡೆಕಟ್ಟೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿಗಳ ಸಭೆಯನ್ನು ಸಂಸದರು ಮಾಡಿದ್ದಾರೆ. ಅದರಲ್ಲಿ ತಪ್ಪಿಲ್ಲ. ಆದರೆ ನಮ್ಮನ್ನು ಸೇರಿಸಿಕೊಂಡು ಸಭೆ ಮಾಡಬಹುದಿತ್ತು ಎಂದು ಹೇಳಿದರು.
ಪಕ್ಷ ಅಧಿಕಾರಕ್ಕೆ ಬಂದಿದ್ದು ಕಾರ್ಯಕರ್ತರ ಶ್ರಮದಿಂದ. ಕೇವಲ ಗ್ಯಾರಂಟಿಗಳ ಆಧಾರದಲ್ಲಿ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕೆಲವರನ್ನಷ್ಟೇ ರಾಜ್ಯ ನಾಯಕರು ಪರಿಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಮೊದಲ ಸಭೆಯಲ್ಲೇ ನಾನು ಸರ್ಕಾರದ ಕೆಲಸ ಮಾಡಲು ಬಂದಿದ್ದೇನೆ. ಕಾನೂನುಬದ್ಧ ಅರ್ಜಿಗಳಿದ್ದರೆ ಮಾತ್ರ ನೋಡುತ್ತೇನೆ ಎಂದಿದ್ದಾರೆ. ಹಾಗಾದರೆ ಕಾರ್ಯಕರ್ತರ ಸಮಸ್ಯೆಗಳನ್ನು ಯಾರಿಗೆ ತಿಳಿಸಬೇಕು ಎಂದು ಪ್ರಶ್ನಿಸಿದರು.
ಸಂಸದರು ಗೆದ್ದ ನಂತರ ಕನಿಷ್ಠ ಕೃತಜ್ಞತೆ ಹೇಳಲಿಲ್ಲ. ಕಾರ್ಯಕ್ರಮಗಳಿಗೆ ಬಂದು ಜೈ ಹೇಳಿಸಿಕೊಂಡು ಹೋಗುತ್ತಾರೆ. ಕಾರ್ಯಕರ್ತರನ್ನು ಕರೆದು ಮಾತನಾಡಿಸುವ ಕನಿಷ್ಠ ಪ್ರಯತ್ನವೂ ಇಲ್ಲ ಎಂದು ದೂರಿದರು.
ಕೇವಲ ಗ್ಯಾರಂಟಿಗಳಿಂದಲೇ ಗೆಲುವು ಸಾಧ್ಯವಿಲ್ಲ. ನಾವು ಗ್ಯಾರಂಟಿ ಕೇಳಿದ್ವಾ ಎಂದು ಮಹಿಳೆಯರೇ ಪ್ರಶ್ನಿಸುತ್ತಿದ್ದಾರೆ. ಹಾಸನದಲ್ಲಿ ಇನ್ನೂ ಜೆಡಿಎಸ್ ಮುನ್ನಡೆಯಲ್ಲಿದೆ. ಎಚ್.ಡಿ. ರೇವಣ್ಣ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಗೆಲುವು ಎಂಬ ಮಾತು ಪ್ರಸ್ತುತ ಸ್ಥಿತಿಗೆ ತಕ್ಕದ್ದೇ ಎಂದು ಹೇಳಿದರು.
ಮತ್ತೊಬ್ಬ ಮುಖಂಡ ಎಚ್.ಎಸ್. ವಿಜಯಕುಮಾರ್ ಮಾತನಾಡಿ, ಈ ಸಭೆ ನಡೆಸುತ್ತಿರುವುದು ಯಾರ ಪರ ಅಥವಾ ವಿರುದ್ದವಲ್ಲ. ಪಕ್ಷದ ಸಂಘಟನೆಗೆ ಅವಕಾಶ ಆಗಬೇಕು. ಸ್ಳಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ದುಡಿಯಬೇಕು ಎಂಬುದು ನಮ್ಮ ಉದ್ದೇಶ. ಸದ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು, ಪಕ್ಷದ ಜಿಲ್ಲೆಯ ಉಸ್ತುವಾರಿ ಜಿ.ಸಿ. ಚಂದ್ರಶೇಖರ್ ಅವರನ್ನು ಭೇಟಿಯಾಗಿ ಚರ್ಚಿಸೋಣ ಎಂದು ಹೇಳಿದರು.
ಬೇಲೂರಿನ ಗ್ರಾನೈಟ್ ರಾಜಶೇಖರ್, ಜಾವಗಲ್ ಮಂಜುನಾಥ್, ಬಿ.ಎಸ್. ಧರ್ಮಪ್ಪ, ವೈ.ಎನ್. ಕೃಷ್ಣೇಗೌಡ, ಅಬ್ದುಲ್ ಸಮದ್, ಅರಕಲಗೂಡು ಕ್ಷೇತ್ರದ ಕೃಷ್ಣೇಗೌಡ, ಪ್ರಸನ್ನ, ಅರಸೀಕೆರೆ ಕ್ಷೇತ್ರದ ಮೆಟ್ರೊ ಬಾಬು, ಸಕಲೇಶಪುರದ ಡಿ.ಸಿ. ಸಣ್ಣಸ್ವಾಮಿ, ಭಾಸ್ಕರ್, ಶ್ರವಣಬೆಳಗೊಳದ ಕ್ಷೇತ್ರದ ಎಂ. ಶಂಕರ್, ಬಿ.ಪಿ. ಮಂಜೇಗೌಡ ಮಾತನಾಡಿದರು.
2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ತೀರ್ಮಾನಕ್ಕೆ ಮಾತ್ರ ಮಹತ್ವ ನೀಡುತ್ತ ಹೋದಲ್ಲಿ ಭವಿಷ್ಯದಲ್ಲಿ ಪಕ್ಷಕ್ಕೆ ಮುಳುವಾಗುತ್ತದೆ ಎಂದು ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಎಚ್ಚರಿಸಿದರು. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್ ಸೋತಿದೆ. ಸೋತಿರುವ ಇಲ್ಲಿನ ನಾಯಕರು ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದು. ಸೋತ ನಾಯಕರಿಗೆ ಬೆಲೆ ನೀಡಬೇಕು. ಆದರೆ ಸರ್ಕಾರದ ಹಂತದಲ್ಲಿ ಆಗುವ ಕೆಲಸಕ್ಕೆ ಅವರಿಂದ ಶಿಫಾರಸು ಪತ್ರ ತರಬೇಕು ಎಂದರೆ ಏನರ್ಥ ಎಂದು ಖಾರವಾಗಿ ಪ್ರಶ್ನಿಸಿದರು. ಎರಡನೇ ಹಂತದ ನಾಯಕರ ಮಾತಿಗೆ ಬೆಲೆ ಇಲ್ಲದಂತಾಗುತ್ತದೆ. ಪಕ್ಷದಲ್ಲಿರುವ ಇತರೆ ನಾಯಕರ ಕೆಲಸ ಮಾಡಿಕೊಡಬೇಕು. ಪಕ್ಷದಲ್ಲಿನ ತೊಂದರೆಗಳನ್ನು ನಾಯಕರ ಗಮನಕ್ಕೆ ತರೋಣ ಎಂದರು.
ಪಕ್ಷದಲ್ಲಿರುವ ಇತರೆ ನಾಯಕರಿಗೆ ಪಕ್ಷದಲ್ಲಿ ಪ್ರಾಧಾನ್ಯತೆ ನೀಡಿದರೆ ಆತ ಪ್ರವರ್ಧಮಾನಕ್ಕೆ ಬರುತ್ತಾನೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ದೊರೆಯುವುದು ಕಷ್ಟವಾಗುತ್ತದೆ ಎಂಬ ಸಂಕುಚಿತ ಭಾವನೆ ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಲ್ಲಿದೆ. ಹಾಗಾಗಿ ಎರಡನೇ ಹಂತದ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಇ.ಎಚ್. ಲಕ್ಷ್ಮಣ್ ದೂರಿದರು. ಕಳೆದ ವಿಧಾನಸಭಾ ಚುನಾವಣೆಯ ಆಕಾಂಕ್ಷಿಗಳು ಚನ್ನರಾಯಪಟ್ಟಣದಲ್ಲಿ ಒಂದೆಡೆ ಸೇರಿ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಯೋಚಿಸುತ್ತಿರುವುದು ಸಂತಸದ ವಿಚಾರ. ಪಕ್ಷದ ಜವಾಬ್ದಾರಿ ನೀಡಬೇಕು ಎಂಬ ಆಶಯ ನಿಮ್ಮದಾಗಿದೆ. ವರಿಷ್ಠರನ್ನು ಭೇಟಿಯಾಗಲು ನಿಮ್ಮ ಜತೆ ನಾನು ಬರುತ್ತೇನೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.