ADVERTISEMENT

ಕೋವಿಡ್‌ ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ: ಶಾಸಕ ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 12:00 IST
Last Updated 6 ಜೂನ್ 2021, 12:00 IST
ಕೆ.ಎಂ.ಶಿವಲಿಂಗೇಗೌಡ
ಕೆ.ಎಂ.ಶಿವಲಿಂಗೇಗೌಡ   

ಹಾಸನ: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದರು.

ಅರಸೀಕರೆವಿಧಾನಸಭಾ ಕ್ಷೇತ್ರದಲ್ಲಿಮೃತರ ಕುಟುಂಬಗಳ ಮನೆಗಳ ಭೇಟಿ ನೀಡಿ, ಆತ್ಮಸ್ಥೈರ್ಯ ತುಂಬುವುದರ ಜತೆಗೆ ವೈಯಕ್ತಿಕವಾಗಿ ₹10 ಸಾವಿರ ನೆರವು ನೀಡಿದ್ದೇನೆ. ಹಲವು ಕುಟುಂಬಗಳು ತೀರಾ ಸಂಕಷ್ಟದಲ್ಲಿವೆ. ಬದುಕು ನಡೆಸುವುದೇ ಕಷ್ಟವಾಗಿದೆ. ಬಿಪಿಎಲ್‌ ಕಾರ್ಡ್‌ದಾರರು ಮತ್ತು ಬಡವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೋವಿಡ್‌ ಕಾಯಿಲೆಯನ್ನು ರಾಷ್ಟ್ರೀಯ ವಿಪತ್ತು ಎಂದು ಸರ್ಕಾರ ಘೋಷಿಸಿದೆ. ಆದರೆ ಪರಿಹಾರ ಮಾತ್ರ ನೀಡುತ್ತಿಲ್ಲ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಧಾರಕೈಗೊಂಡು, ಪ್ರತಿ ಕುಟುಂಬಕ್ಕೂ ತಲಾ ಒಂದು ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಮೊತ್ತ ನೀಡಿದರೆ ಒಳ್ಳೆಯದು. ತೀರಾ ಸಂಕಷ್ಟದಲ್ಲಿರುವವರಿಗೆ ಪರಿಹಾರ ನೀಡಲೇ ಬೇಕು ಎಂದರು.

ADVERTISEMENT

ಕೋವಿಡ್‌ನಿಂದ ಮೃತಪಟ್ಟವರ ಅಂಕಿ ಅಂಶವನ್ನು ತಾಲ್ಲೂಕು ಆಡಳಿತ ಸರಿಯಾಗಿ ನೀಡುತ್ತಿಲ್ಲ. ತಾಲ್ಲೂಕು ಆಡಳಿತ ನೀಡಿರುವ ಮಾಹಿತಿ ಪ್ರಕಾರ ಅರಸೀಕೆರೆ ಪಟ್ಟಣದಲ್ಲಿ 31 ಜನರು ಮೃತಪಟ್ಟಿದ್ದಾರೆ. ಆದರೆ, ಪ್ರವಾಸದ ವೇಳೆ 50ಕ್ಕೂ ಹೆಚ್ಚ ಜನರು ಸಾವಿಗೀಡಾಗಿರುವುದು ಗೊತ್ತಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ, ಮನೆ ಆರೈಕೆಯಲ್ಲಿ ಹಾಗೂ ಹೊರ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯಲು ಹೋಗಿ ಮೃತಪಟ್ಟವರ ಲೆಕ್ಕ ತಾಲ್ಲೂಕು ಆಡಳಿತದ ಬಳಿ ಇಲ್ಲ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಪ್ರತಿ ಗ್ರಾಮಗಳಲ್ಲೂ ಕೋವಿಡ್‌ ನಿಂದ ಮೃತಪಟ್ಟವರ ಮಾಹಿತಿ ಸಂಗ್ರಹಿಸಬೇಕು. ಅರಸೀಕೆರೆ ತಾಲ್ಲೂಕಿನ ಕೆಲವರು ಚಿಕ್ಕಮಗಳೂರು, ತಿಪಟೂರು, ಮೈಸೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೆಲವರು ಅಲ್ಲಿಯೇ ಮೃತಪಟ್ಟಿದ್ದಾರೆ. ಅಂತಹವರ ಮಾಹಿತಿ ಅಲ್ಲಿಯ ಜಿಲ್ಲೆಯಲ್ಲಿ ದಾಖಲಾಗಿರುತ್ತದೆ. ಅವರ ಮಾಹಿತಿಯನ್ನು ಆಯಾ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದರೆ ಪರಿಹಾರ ನೀಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕ ಮಾಡಲಾಗಿದೆ. ಆದರೆ ತಜ್ಞ ವೈದ್ಯರು ಇನ್ನು ಬಂದಿಲ್ಲ. ಎಂಜಿನಿಯರ್‌ ಕಾಲೇಜು ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕೆಲವರು ತಡೆಯಾಜ್ಞೆ ತರಲು ಪ್ರಯತ್ನಿಸುತ್ತಿದ್ದಾರೆ. ಜಿಲ್ಲಾಡಳಿತ ವಸ್ತುಸ್ಥಿತಿ ಕುರಿತು ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ರಘು ಹೊಂಗೆರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.