ADVERTISEMENT

ಹಾಸನ: ನೆಲ ಕಚ್ಚಿದ ಫಸಲು; ಅನ್ನದಾತ ಕಂಗಾಲು

ನಾಲ್ಕು ತಾಲ್ಲೂಕುಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ

ಕೆ.ಎಸ್.ಸುನಿಲ್
Published 12 ಆಗಸ್ಟ್ 2020, 16:07 IST
Last Updated 12 ಆಗಸ್ಟ್ 2020, 16:07 IST
ಆಲೂರು ತಾಲ್ಲೂಕಿನ ಕೊಡಗಿಹಳ್ಳಿಯಲ್ಲಿ ಪೃಥ್ವಿರಾಜ್‌ ಅವರ ಹೊಲದಲ್ಲಿ ಮುಸುಕಿನ ಜೋಳ ನೆಲ ಕಚ್ಚಿರುವುದು.
ಆಲೂರು ತಾಲ್ಲೂಕಿನ ಕೊಡಗಿಹಳ್ಳಿಯಲ್ಲಿ ಪೃಥ್ವಿರಾಜ್‌ ಅವರ ಹೊಲದಲ್ಲಿ ಮುಸುಕಿನ ಜೋಳ ನೆಲ ಕಚ್ಚಿರುವುದು.   

ಹಾಸನ: ಮುಂಗಾರು ಮಳೆ ಆರ್ಭಟ ನಿಂತಿದೆ. ಆದರೆ, ಮಳೆ ತಂದೊಡ್ಡಿರುವ ನಷ್ಟದಿಂದ ಜಿಲ್ಲೆಯ ರೈತರು ಸುಧಾರಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ.

ಹಾಸನ, ಸಕಲೇಶಪುರ, ಬೇಲೂರು, ಅರಕಲಗೂಡು ತಾಲ್ಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬಿರುಗಾಳಿ ಮಳೆಗೆ ಆಲೂಗಡ್ಡೆ, ಶುಂಠಿ, ಭತ್ತ, ತಂಬಾಕು, ಮುಸುಕಿನ ಜೋಳದ ಬೆಳೆಗಳು ಹಾನಿಗೀಡಾಗಿವೆ. ಕಟಾವಿನ ಹಂತಕ್ಕೆ ಬಂದಿದ್ದ ಗಿಡಗಳು ಪ್ರವಾಹಕ್ಕೆ ಸಿಲುಕಿ ಅಪಾರ ಪ್ರಮಾಣದಲ್ಲಿ ನಷ್ಟಕ್ಕೀಡಾಗಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಬೆಳೆದಿದ್ದ ಹೊಗೆಸೊಪ್ಪು ಬೆಳೆ ಸಹ ನೀರಿನಲ್ಲಿ ಮುಳುಗಿ ಕೊಳೆಯುತ್ತಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಸೂಕ್ತ ಮಾರುಕಟ್ಟೆ ಸಿಗದೆ ಪರದಾಡುತ್ತಿದ್ದ ರೈತರಿಗೆ ಮಳೆ ದೊಡ್ಡ ಹೊಡೆತ ಬಿದ್ದಿದೆ.

ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ಜಮೀನು ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಜಿಲ್ಲೆಯಲ್ಲಿ 3,750 ಹೆಕ್ಟೇರ್‌ ಮುಸುಕಿನ ಜೋಳ, 570 ಹೆಕ್ಟೇರ್ ಭತ್ತ, 140 ಹೆಕ್ಟೇರ್‌ ಪ್ರದೇಶದಲ್ಲಿ ತಂಬಾಕು ಬೆಳೆ ಹಾನಿಯಾಗಿದೆ.

ADVERTISEMENT

‘ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದ್ದು, ಪ್ರಾಥಮಿಕ ವರದಿ ಪ್ರಕಾರ 4,460 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ನಿಖರವಾಗಿ ಗೊತ್ತಾಗಲಿದೆ’ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಸಹ ಹಾನಿಯಾಗಿದೆ. ಮೊದಲೇ ಅಂಗಮಾರಿ ರೋಗ ಹಾಗೂ ಕಳಪೆ ಬಿತ್ತನೆ ಬೀಜದಿಂದ ಬೆಳೆ ಹಾಳಾಗಿ ಸಂಕಷ್ಟದಲ್ಲಿದ್ದ ಬೆಳೆಗಾರರಿಗೆ ಗಾಯದ ಮೇಲೆ ಬರ ಎಳೆದಂತಾಗಿದೆ.

ಬೇಲೂರು ತಾಲ್ಲೂಕಿನ ಅರೇಹಳ್ಳಿ, ಸಂಕೇನಹಳ್ಳಿ, ಆಲೂರು ತಾಲ್ಲೂಕಿನ ರಾಮನಹಳ್ಳಿ, ಸುಳಗೋಡು, ಗರಿಘಟ್ಟ, ಬಸವನಹಳ್ಳಿ, ಗಂಜಿಗೆರೆ, ಸಿದ್ದಾಪುರ, ಹಾಸನ ತಾಲ್ಲೂಕಿನ ಗೋವಿಂದಪುರ, ಆಲದಹಳ್ಳಿ, ಕಂಚಮಾರನಹಳ್ಳಿ, ಕಡಗದಲ್ಲಿ ಸೇರಿ ಹಲವು ಗ್ರಾಮಗಳಲ್ಲಿ ಮುಸುಕಿನ ಜೋಳದ ಹೊಲಗಳಲ್ಲಿ ಮಳೆಯ ನೀರು ಸಂಗ್ರಹವಾಗಿ ಬಹುಪಾಲು ಹಾನಿಯಾಗಿದೆ.

ಆಲೂರಿನ ರೈತ ಕಿರಣ್‌ ಅವರು ಪತ್ನಿಯ ಆಭರಣ ಅಡವಿಟ್ಟು ಎಂಟು ಎಕರೆ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಿದ್ದರು. ಜೋಳ ಹುಲುಸಾಗಿ ಬೆಳೆದಿತ್ತು. ಇನ್ನೇರಡು ತಿಂಗಳು ಕಳೆದಿದ್ದರೆ ಬೆಳೆ ಕೈ ಸೇರುತ್ತಿತ್ತು. ಆದರೆ, ವರುಣ ಅವರ ಆಸೆಗೆ ತಣ್ಣೀರೆರಚಿದ. ಆಲೂರು ತಾಲ್ಲೂಕು ಒಂದರಲ್ಲೇ ಸಾವಿರ ಹೆಕ್ಟೇರ್‌ ಜೋಳ ಹಾಳಾಗಿದೆ.

‘ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಜೋಳ ಬಿತ್ತನೆ ಮಾಡಿದೆ. ಬೆಳೆಯೂ ಚೆನ್ನಾಗಿತ್ತು. ಬೆಳೆ ಕೈ ಸೇರಿದ್ದರೆ ಮಾಡಿದ ಸಾಲ ತೀರಿಸಿ, ಕೈಯಲ್ಲಿ ಸ್ವಲ್ಪ ಹಣವೂ ಉಳಿಯುತ್ತಿತ್ತು. ಆದರೆ, ನಿರಂತರವಾಗಿ ಸುರಿದ ಮಳೆಯಿಂದ ನೆಲ ಕಚ್ಚಿದೆ. ಸಾಲ ಮರುಪಾವತಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ಎಂದು ಕಿರಣ್‌ ಕಣ್ಣೀರಿಟ್ಟರು.

‘ಅತಿಯಾದ ಮಳೆ ಹಾಗೂ ಬಿರುಗಾಳಿಯಿಂದಾಗಿ ನಾಲ್ಕು ಎಕರೆ ಬೆಳೆ ನೆಲ ಕಚ್ಚಿದೆ. ಗೊಬ್ಬರ, ಬೀಜ, ಕೂಲಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದೆ. ಬೆಳೆ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ಎಂದು ರೈತ ಪೃಥ್ವಿರಾಜ್‌ ಆಗ್ರಹಿಸಿದರು.

‘ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಬೆಳೆ ಪರಿಹಾರ ನೀಡಬೇಕು. ಅತಿವೃಷ್ಟಿಯಿಂದ ಹಾನಿಯಾಗಿರುವ ರೈತರ ಪ್ರತಿ ಎಕರೆಗೆ ಸರ್ಕಾರ ತಕ್ಷಣ ₹ 25 ಸಾವಿರಿಂದ ₹ 30 ಸಾವಿರ ಪರಿಹಾರ ಘೋಷಣೆ ಮಾಡಬೇಕು. ಇಲ್ಲವಾದರೆ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.