ADVERTISEMENT

ಹಾಸನ ‌| ದೇವರ ಮೊರೆ ಹೋದ ಗೌಡರ ಕುಟುಂಬ

ಶೃಂಗೇರಿ ಮಠದ ಕಿರಿಯ ಶ್ರೀ ಸಾನಿಧ್ಯ, ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 16:00 IST
Last Updated 14 ನವೆಂಬರ್ 2019, 16:00 IST
ಹಾಸನದ ಜ್ಞಾನಾಕ್ಷಿ ಕಲ್ಯಾಣ ಮಂಟಪ ಪಕ್ಕ ನಿರ್ಮಾಣಗೊಂಡಿರುವ ಗಣಪತಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದವರು ಭಾಗಿಯಾಗಿದ್ದರು.
ಹಾಸನದ ಜ್ಞಾನಾಕ್ಷಿ ಕಲ್ಯಾಣ ಮಂಟಪ ಪಕ್ಕ ನಿರ್ಮಾಣಗೊಂಡಿರುವ ಗಣಪತಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದವರು ಭಾಗಿಯಾಗಿದ್ದರು.   

ಹಾಸನ: ಜೆಡಿಎಸ್‌ ವರಿಷ್ಠ ಎಚ್.ಡಿ ದೇವೇಗೌಡ ಅವರು ಕುಟುಂಬ ಸಮೇತರಾಗಿ ಗುರುವಾರ ತವರು ಜಿಲ್ಲೆಯಲ್ಲಿ ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದರು.

ಬುಧವಾರ ರಾತ್ರಿಯೇ ಪತ್ನಿ ಚೆನ್ನಮ್ಮ ಸಮೇತ ನಗರಕ್ಕೆ ಬಂದು ವಾಸ್ತವ್ಯ ಹೂಡಿದ್ದ ಗೌಡರು, ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಗ್ಗೆ 9 ಗಂಟೆಗೆ ನಗರದ ಬಿ.ಎಂ.ರಸ್ತೆಯಲ್ಲಿರುವ ಜ್ಞಾನಾಕ್ಷಿ ಕಲ್ಯಾಣ ಮಂಟಪ ಪಕ್ಕ ನಿರ್ಮಾಣಗೊಂಡಿರುವ ಗಣಪತಿ ದೇವಾಲಯ ಉದ್ಘಾಟನೆ ನೆರವೇರಿಸಿದರು.

ADVERTISEMENT

ನಂತರ ಹೊಳೆನರಸೀಪುರ ತಾಲ್ಲೂಕು ಪಡುವಲಹಿಪ್ಪೆ ಗ್ರಾಮದಲ್ಲಿ ವಿವಿಧ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯದಲ್ಲಿ ಕುಟುಂಬ ಸಮೇತರಾಗಿ ಭಾಗಿಯಾದರು.

ಮಧ್ಯಾಹ್ನ ಹುಟ್ಟೂರು ಹರದನಹಳ್ಳಿಗೆ ಬಂದ ಗೌಡರು, ಮನೆ ದೇವರಾದ ದೇವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆಂಜನೇಯಸ್ವಾಮಿ ಮತ್ತು ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಗಳ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಶೃಂಗೇರಿ ಮಠದ ಕಿರಿಯ ವಿಧುರ ಶೇಖರ ಭಾರತಿ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ದೇವೇಗೌಡರೊಂದಿಗೆ ಪತ್ನಿ ಚೆನ್ನಮ್ಮ, ಪುತ್ರ ಎಚ್.ಡಿ. ರೇವಣ್ಣ, ಸೊಸೆ ಭವಾನಿ, ಮೊಮ್ಮಗ ಹಾಗೂ ಸಂಸದ ಪ್ರಜ್ವಲ್ ರೇವಣ್ಣ, ಡಾ.ಸೂರಜ್ ಸೇರಿ ಹಲವು ಗಣ್ಯರು ಇದ್ದರು.

ಕಷ್ಟ ನೆನೆದುಕಣ್ಣೀರಾದ ಗೌಡರು
ಹರದನಹಳ್ಳಿಯಲ್ಲಿ ದೇವೇಗೌಡರು ತಾವು ಬೆಳೆದು ಬಂದ ದಾರಿಯನ್ನು ನೆನೆಯುತ್ತಾ ಕ್ಷಣ ಕಾಲ ಭಾವುಕರಾಗಿ ಕಣ್ಣೀರು ಹಾಕಿದರು. ‘ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಏನೇ ಕಷ್ಟ ಆದರೂ ನಾವು ಶೃಂಗೇರಿ ಗುರುಗಳನ್ನ ಬಿಡಲಿಲ್ಲ. ಏನೇ ನೋವು ನಲಿವು ಬಂದರೂ ಆಶೀರ್ವಾದದಿಂದಲೇ ಎಲ್ಲವನ್ನೂ ಶ್ರದ್ಧೆ, ಭಕ್ತಿಯಿಂದ ಸ್ವೀಕಾರ ಮಾಡಿದ್ದೇವೆ ಎಂಬುದನ್ನು ಯಾರನ್ನು ಮೆಚ್ಚಿಸಬೇಕಿಲ್ಲ‌’ ಎಂದರು.

ತಮ್ಮ ತಾಯಿ-ತಂದೆ ಪಟ್ಟ ಕಷ್ಟ ನೆನೆದ ಗೌಡರು, ‘ನನ್ನ ತಂದೆಗೆ 10 ದಿನದೊಳಗೆ ಮೂರು ಗಂಡು ಮಕ್ಕಳು ತೀರಿ ಹೋದರು. ನಾನು ಉಳಿಯಲಿ‌ ಎಂದು ತಾಯಿ ಪ್ರತಿ ನಿತ್ಯ ದೇವೇಶ್ವರ ದೇವಾಲಯದಲ್ಲಿ ಕಸ ಗುಡಿಸಿ ರಂಗೋಲಿ ಹಾಕಿ ಸೇವೆ ಮಾಡುತ್ತಿದ್ದರು. ಆ‌ ದೇವರ ದಯೆಯಿಂದ ಬದುಕುಳಿದಿದ್ದೇನೆ‌’ ಎಂದು ಭಾವುಕರಾದರು.

‘ಇಡೀ ಕುಟುಂಬ ಶೃಂಗೇರಿ ಶ್ರೀಗಳ ಸಂಸ್ಥಾನಕ್ಕೆ ಅಭಾರಿಯಾಗಿದೆ. ಕುಮಾರಸ್ವಾಮಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಉಪ ಚುನಾವಣೆ ಸೀಟು ಹಂಚಿಕೆ ವಿಚಾರವಾಗಿ ಅವರಿಗೆ ಬಿಡುವಿಲ್ಲ. ಆದರೆ, ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ದೂರವಾಣಿ ಕರೆ ಮಾಡಿ ಕುಮಾರಸ್ವಾಮಿ ಶೃಂಗೇರಿ ಶ್ರೀಗಳ ಕ್ಷಮೆ ಕೇಳಿದ್ದಾರೆ’ ಎಂದು ಗೌಡರು ಹೇಳಿದರು.

‘ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಮಾತನಾಡುವಾಗಲೂ ಶಾರದಾಂಬೆ ಮತ್ತು ಸ್ವಾಮೀಜಿ ಅವರನ್ನು ನೆನೆದೇ ಮಾತನಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.