ADVERTISEMENT

ಹಳೇಬೀಡು: ಭರ್ತಿಯಾದ ದ್ವಾರಸಮುದ್ರ ಕೆರೆ; ರೈತರಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 11:42 IST
Last Updated 27 ನವೆಂಬರ್ 2021, 11:42 IST
ಹಳೇಬೀಡಿನ ದ್ವಾರಸಮುದ್ರ ಕೆರೆ ಶುಕ್ರವಾರ ರಾತ್ರಿ ಭರ್ತಿಯಾಗಿ ಕೋಡಿ ಬಿದ್ದಿರುವುದು
ಹಳೇಬೀಡಿನ ದ್ವಾರಸಮುದ್ರ ಕೆರೆ ಶುಕ್ರವಾರ ರಾತ್ರಿ ಭರ್ತಿಯಾಗಿ ಕೋಡಿ ಬಿದ್ದಿರುವುದು   

ಹಳೇಬೀಡು: ಐತಿಹಾಸಿಕ ಮಹತ್ವ ಹೊಂದಿರುವ ಹಳೇಬೀಡಿನ ದ್ವಾರಸಮುದ್ರ ಕೆರೆ ಶುಕ್ರವಾರ ಮಧ್ಯರಾತ್ರಿ ಕೋಡಿ ಬಿದ್ದಿದ್ದು ಜನರಲ್ಲಿ ಸಂಭ್ರಮ ಕಂಡು ಬಂತು.

ಹಾಸನ ಜಿಲ್ಲೆಯಲ್ಲಿಯೇ ದ್ವಾರಸಮುದ್ರ ಕೆರೆ ದೊಡ್ಡದಾಗಿದೆ. ಅಲ್ಲದೆ ಹತ್ತಾರು ಕಿ.ಮೀ. ದೂರದವರೆಗೂ ಅಂತರ್ಜಲ ವೃದ್ಧಿಸುತ್ತಿದೆ. ಹೀಗಾಗಿ ದ್ವಾರಸಮುದ್ರ ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲಿನ ಊರಿನ ಜನರಲ್ಲಿಯೂ ಸಂತಸ ಕಂಡು ಬಂದಿದೆ.

14 ವರ್ಷದ ನಂತರ ದ್ವಾರಸಮುದ್ರ ಕೆರೆ ಭರ್ತಿಯಾಗಿತ್ತು. ರಾಜಕೀಯ ಪಕ್ಷದವರು ಹಾಗೂ ಸಂಘ ಸಂಸ್ಥೆಯವರು ಪೈಪೋಟಿಯಲ್ಲಿ ವೈಭವದಿಂದ ಗಂಗಾಪೂಜೆ ನೆರವೇರಿಸಿದ್ದರು. ಸ್ವಲ್ಪ ದಿನದಲ್ಲಿಯೇ ಕೆರೆ ಏರಿ ಜಖಂ ಆಗಿತು. ಏರಿ ದುರಸ್ತಿಗಾಗಿ ಕೋಡಿಯಿಂದ ನೀರನ್ನು ಹೊರ ತೆಗೆಯಲಾಯಿತು.

ADVERTISEMENT

ಅಪರೂಪಕ್ಕೆ ಭರ್ತಿಯಾದ ಕೆರೆ ನೀರನ್ನು ಹೊರ ಹಾಕಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಕೆರೆ ನೀರನ್ನು ಹೊರ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಪ್ರತಿಭಟನೆ ಸಹ ನಡೆಸಿದ್ದರು.

ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ, ಶಾಸಕ ಕೆ.ಎಸ್.ಲಿಂಗೇಶ್, ಜಿಲ್ಲಾಧಿಕಾರಿ ಆರ್.ಗಿರೀಶ್ ಮೊದಲಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರತಿಭಟನಾನಿರತರಿಂದ ಸಮಾಧಾನ ಹೇಳಿ ಏರಿ ದುರಸ್ತಿ ಮಾಡಿಸಲಾಯಿತು. ಏರಿ ಬಂದೋಬಸ್ತ್ ಆಗಿ ದುರಸ್ತಿಯಾಗಿರುವುದರಿಂದ ಈ ವರ್ಷ ಕೆರೆಯಲ್ಲಿ ನೀರು ನಿಲ್ಲುತ್ತದೆ ಎಂಬ ಸಮಾಧಾನದ ಮಾತು ಜನರಿಂದ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.