
ಹಳೇಬೀಡು (ಹಾಸನ): ಕೆಲಸಕ್ಕೆ ಕರೆದೊಯ್ದು ಕೂಲಿಯನ್ನು ಕೊಡದೇ ಹೋಬಳಿಯ ಚಟ್ನಹಳ್ಳಿ ಗ್ರಾಮದಲ್ಲಿ ಅಕ್ರಮ ಬಂಧನದಲ್ಲಿ ಇರಿಸಲಾಗಿದ್ದ 18 ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗರಾಜ್ ಮತ್ತು ಮೋಹನೇಶ್ ಎಂಬವರನ್ನು ಬಂಧಿಸಲಾಗಿದೆ.
ರೈಲ್ವೆ ನಿಲ್ದಾಣಗಳಲ್ಲಿ ಆಶ್ರಯವಿಲ್ಲದೆ ಇದ್ದ ಜನರನ್ನು ಗುರುತಿಸುತ್ತಿದ್ದ ಆರೋಪಿಗಳು, ಕೆಲಸ ಕೊಡಿಸುವುದಾಗಿ ಹೇಳಿ ಅವರನ್ನು ಕರೆ ತರುತ್ತಿದ್ದರು. ನಂತರ ಶುಂಠಿ ಕೃಷಿ ಕೆಲಸಕ್ಕೆ ಕರೆದೊಯ್ಯುತ್ತಿದ್ದರು. ಕೆಲಸ ಮುಗಿದ ಬಳಿಕ ಅವರಿಗೆ ಕೂಲಿ ನೀಡುತ್ತಿರಲಿಲ್ಲ ಮತ್ತು ಅವರನ್ನೆಲ್ಲ ಒಂದೇ ಜಾಗದಲ್ಲಿ ಬಂಧಿಸಿ ಇರಿಸುತ್ತಿದ್ದರು.
‘ಮೂಲಸೌಲಭ್ಯಗಳಿಲ್ಲದ ಒಂದೇ ಶೆಡ್‌ನಲ್ಲಿ ಎಲ್ಲರನ್ನೂ ಇರಿಸಲಾಗುತ್ತಿತ್ತು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಿಸಿ, ರಾತ್ರಿ ಮತ್ತೆ ಶೆಡ್‌ಗೆ ತಂದು ಬಿಡುತ್ತಿದ್ದರು. ಹೊರಗಿನವರ ಸಂಪರ್ಕ ಸಿಗದಂತೆ ನಿಗಾವಹಿಸಿದ್ದರು’ ಎಂದು ರಕ್ಷಣೆಗೆ ಒಳಗಾದ ಕಾರ್ಮಿಕರೊಬ್ಬರು ತಿಳಿಸಿದರು.
ಕೇರಳ, ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳ ಕಾರ್ಮಿಕರು ಹಾಗೂ ರಾಜ್ಯದ ಹಾವೇರಿ, ವಿಜಯಪುರ, ಗದಗ ಸೇರಿದಂತೆ ಹಲವೆಡೆಗಳಿಂದ ಬಂದವರು ಇವರಲ್ಲಿದ್ದಾರೆ.
ವಿಜಯಪುರ ಜಿಲ್ಲೆಯ ರಜತ್ ಎಂಬಾತ ಇಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು, ತನ್ನ ಸ್ನೇಹಿತ ಈರಣ್ಣನನ್ನು ಬೇಲೂರಿನಲ್ಲಿ ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಬಹಿರಂಗಪಡಿಸಿದ್ದ.
ಇದನ್ನು ಆಧರಿಸಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ನೇತೃತ್ವದಲ್ಲಿ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು. ಈಗ ರಕ್ಷಿಸಿರುವ ಕಾರ್ಮಿಕರಿಗೆ ಹಾಸನದ ಅಂಬೇಡ್ಕರ್ ಭವನದಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದ್ದು, ಅಗತ್ಯ ಸೌಲಭ್ಯ ಒದಗಿಸಲಾಗಿದೆ.
‘ಜೀತಪದ್ದತಿ ನಿಷೇಧ ಕಾಯ್ದೆಯಡಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ. ‘ರಕ್ಷಿಸಲಾದ 18 ಮಂದಿಗೆ ಪುನರ್ವಸತಿ, ಆಹಾರ, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.