ADVERTISEMENT

ಹೆತ್ತೂರು: ಮಲೆನಾಡಿನಲ್ಲಿ ಭತ್ತದ ಕೃಷಿಗೆ ಸಂಚಕಾರ

ಹೆತ್ತೂರು ಸುತ್ತ ಮಿತಿಮೀರಿದ ಕಾಡಾನೆ ಹಾವಳಿ: ರೈತರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 1:41 IST
Last Updated 8 ಆಗಸ್ಟ್ 2025, 1:41 IST
<div class="paragraphs"><p>ಹೆತ್ತೂರು ಹೋಬಳಿಯ ಬಿಳುತಾಳು ಗ್ರಾಮದ ಪಾಲಾಕ್ಷ ಅವರ ಭತ್ತದ ಗದ್ದೆಯಲ್ಲಿ ನಾಟಿ ಮಾಡಲು ಸಿದ್ದವಾಗಿದ್ದ ಸಸಿಮಡಿಯನ್ನು ಕಾಡಾನೆಗಳು ನಾಶ ಮಾಡಿವೆ.</p></div>

ಹೆತ್ತೂರು ಹೋಬಳಿಯ ಬಿಳುತಾಳು ಗ್ರಾಮದ ಪಾಲಾಕ್ಷ ಅವರ ಭತ್ತದ ಗದ್ದೆಯಲ್ಲಿ ನಾಟಿ ಮಾಡಲು ಸಿದ್ದವಾಗಿದ್ದ ಸಸಿಮಡಿಯನ್ನು ಕಾಡಾನೆಗಳು ನಾಶ ಮಾಡಿವೆ.

   

ಹೆತ್ತೂರು: ಭತ್ತದ ಗದ್ದೆಗೆ ಪ್ರತಿ ವರ್ಷವೂ ಕಾಡಾನೆಗಳ ಹಿಂಡು ದಾಳಿ ನಡೆಸಿ, ಬೆಳೆ ಯನ್ನು ನಾಶಗೊಳಿಸುತ್ತಿದ್ದು, ಕಾಡಾನೆ ಹಾವಳಿಯಿಂದ ಬೇಸತ್ತು ಹಲವು ಕೃಷಿಕರು ಕೃಷಿ ಭೂಮಿಯನ್ನು ಪಾಳುಬಿಟ್ಟಿದ್ದಾರೆ.

ಹಾಡ್ಲಹಳ್ಳಿ, ಬೂಬ್ಬನಹಳ್ಳಿ, ಹಳ್ಳಿಯೂರು, ಕಿರ್ಕಳ್ಳಿ, ಉಚ್ಚಂಗಿ, ಅತ್ತಿಹಳ್ಳಿ, ಕೊಂತನಮನೆ, ಹಾಡ್ಯ ಸೇರಿದಂತೆ ಯಸಳೂರು, ಹೆತ್ತೂರು ಹೋಬಳಿಯ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ.  ಕೃಷಿಯನ್ನೇ ಅವಲಂಬಿಸಿರುವ ಇವರಿಗೆ ಕೆಲವು ವರ್ಷಗಳಿಂದ ಕಾಡಾನೆ ಹಾವಳಿಯಿಂದಾಗಿ ಬೆಳೆದ ಭತ್ತ ಕೈಗೆ ಸಿಗದೆ ನಷ್ಟ ಅನುಭವಿಸುವಂತಾಗಿದೆ.

ADVERTISEMENT

‘ಕಾಡಾನೆ ಹಿಂಡು ಹಗಲು ಕಾಫಿ ತೋಟಗಳಲ್ಲಿ ಬೀಡು ಬಿಡುತ್ತಿವೆ. ರಾತ್ರಿ ವೇಳೆ ಭತ್ತದ ಗದ್ದೆಗಳಿಗೆ ಇಳಿಯುತ್ತಿದ್ದು, ಕೃಷಿ ನಷ್ಟವಾಗುತ್ತಿದೆ. ಬೇಸತ್ತ ಹಲವು ಕೃಷಿಕರು ಗದ್ದೆಯನ್ನು ಪಾಳು ಬಿಡಲಾರಂಭಿಸಿದ್ದಾರೆ. ಮುಂದೆ ಕೃಷಿಗೆ ಸಂಚಕಾರ ಎದುರಾಗಲಿದೆ’ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಹೊಂಗಡಹಳ್ಳ, ವನಗೂರು, ವಳಲಹಳ್ಳಿ, ಹೆತ್ತೂರು, ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕೃಷಿಕರು ಹಲವು ವರ್ಷದಿಂದ ಗದ್ದೆ ಪಾಳು ಬಿಟ್ಟಿದ್ದಾರೆ. ಪ್ರತಿ ವರ್ಷವೂ ಭತ್ತದ ಸಸಿ ಮಡಿ, ನಾಟಿಯಾದ ನಂತರ ಕಾಡಾನೆಗಳ ಹಿಂಡು ಭತ್ತದ ಗದ್ದೆಗೆ ಲಗ್ಗೆ ಇಡುವುದರಿಂದ ನಷ್ಟ ತಾಳಲಾರದೆ ಗದ್ದೆಯನ್ನು ಪಾಳು ಬಿಡಬೇಕಾಗಿದೆ. ಇನ್ನು ಕೆಲವು ಕೃಷಿಕರು ಕಾಡಾನೆಯ ದಾಳಿಗೆ ಹೆದರಿ ಶುಂಠಿ, ಅಡಿಕೆ ಕೃಷಿ ಮಾಡಿದ್ದಾರೆ. ಕೃಷಿ ಗದ್ದೆಯಲ್ಲಿ ಕಾಫಿ ಹಾಗೂ ಕರಿಮೆಣಸು ಗಿಡವನ್ನು ನೆಟ್ಟು ತೋಟವಾಗಿ ಪರಿವರ್ತಿಸಿದ್ದಾರೆ.

ಅರಣ್ಯ ಇಲಾಖೆ ಹಾಗೂ ಆರ್.ಆರ್.ಟಿ. ತಂಡ ಕಾಡಾನೆಗಳನ್ನು ಪಟಾಕಿ ಸಿಡಿಸಿ ಕಾಡಿಗಟ್ಟುತ್ತಿದ್ದಾರೆ. ಆದರೆ ಕಾಡಿಗೆ ಹೋಗುವ ಆನೆಗಳು ಕೆಲವೇ ದಿನಗಳಲ್ಲಿ ಮರಳಿ ನಾಡಿಗೆ ಬರುತ್ತಿವೆ. ಮತ್ತೆ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ದಾಂಧಲೆ ನಡೆಸುತ್ತಿದ್ದು, ಕೃಷಿಕರ ನೆಮ್ಮದಿ ಹಾಳು ಮಾಡಿವೆ. ಕೆಲವೆಡೆಗಳಲ್ಲಿ ಕೃಷಿ ಮಾಡಿದ ರೈತರು ಜೀವ ಭಯ ಬಿಟ್ಟು ಗದ್ದೆಯ ಬದಿಯಲ್ಲಿ ಅಟ್ಟಣೆ ನಿರ್ಮಿಸಿ ರಾತ್ರಿಯಿಡಿ ಕಾವಲು ಕೂರು ತ್ತಿದ್ದಾರೆ.

‘ಶಾಶ್ವತ ಕ್ರಮ ಆಗಲಿ’

‘ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆರಣ್ಯದ ಸುತ್ತಲೂ ಕಂದಕ, ನೇತು ಬಿಡಲಾದ ಸೌರ ಬೇಲಿ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕಾಡಾನೆ ನಿಯಂತ್ರಣವಾಗಿಲ್ಲ. ಸರ್ಕಾರ ಕೂಡ ಕಾಡಾನೆ ಹಾವಳಿ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್, ಆನೆ ಕಾರಿಡಾರ್ ಸೇರಿದಂತೆ ಶಾಶ್ವತ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕು’ ಎನ್ನುವುದು ಈ ಭಾಗದ ರೈತರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.