ಹಾಸನ: ಹೋಂ ಸ್ಟೇ, ರೇಸಾರ್ಟ್‌ಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ಪಟ್ಟಿ ಮಾಡಿ. ಜೊತೆಗೆ ಅವುಗಳನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ರೈಲುಗಳ ಮೂಲಕ ಹೊರ ರಾಜ್ಯಗಳಿಂದ ಬರುವ ಗಾಂಜಾ ಪತ್ತೆ ಹಚ್ಚಿ ವಶಪಡಿಸಿಕೊಳ್ಳಬೇಕು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಾರ್ಕೊ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿ. ಗಾಂಜಾ ಸಾಗಾಣಿಕೆ ಪತ್ತೆಗಾಗಿ ನಾರ್ಕೊ ಡಾಗ್ ಸ್ಕ್ವಾಡ್ ಬಳಸಿಕೊಳ್ಳಬೇಕು. ಮಾದಕ ವಸ್ತುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿದಿನ ಪರಿಶೀಲನೆ ಮಾಡಬೇಕು. ಈ ನಿಟ್ಟಿನಲ್ಲಿ ರೈಲ್ವೆ ಸಿನಿಯರ್ ಸೆಕ್ಯೂರಿಟಿ ಕಮೀಷನರ್‌ಗೆ ಪತ್ರ ಬರೆಯುವಂತೆ ತಿಳಿಸಿದರು.
ಜಿಲ್ಲೆಯನ್ನು ನಶಾಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದ ಹಾಗೂ ಪ್ರತಿ ತಾಲ್ಲೂಕು ಮಟ್ಟದಲ್ಲಿಯೂ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸುವಂತೆ ತಹಶೀಲ್ದಾರರಿಗೆ ಸೂಚಿಸಿದ ಅವರು, ಉಪ ವಿಭಾಗಾಧಿಕಾರಿಗಳು ಮೇಲ್ವಿಚಾರಣೆ ಮಾಡುವಂತೆ ನಿರ್ದೇಶನ ನೀಡಿದರು.
ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಗಾಂಜಾ ಬೆಳೆಯುತ್ತಿರುವ ಬಗ್ಗೆ ಪರಿಶೀಲನೆ ಮಾಡಬೇಕು. ಯಾವುದಾದರೂ ದೂರುಗಳು ಕಂಡುಬಂದಲ್ಲಿ ತಹಶೀಲ್ದಾರರೂ ಗಮನಹರಿಸಬೇಕು ಎಂದರು.
ಜಿಲ್ಲಾ ಮಟ್ಟದ ನಾರ್ಕೊ ಸಮಿತಿಯನ್ನು ಪುನರ್ ರಚಿಸಿ, ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಸುತ್ತೋಲೆ ಹೊರಡಿಸುವಂತೆ ತಿಳಿಸಿದ ಅವರು, 10 ತಂಡ ರಚಿಸಿ ಪಿಎಸ್ಐ, ತಾಲ್ಲೂಕು ಆರೋಗ್ಯ ಅಧಿಕಾರಿ, ಫಾರ್ಮಾಸಿಸ್ಟ್ ತಂಡದಲ್ಲಿರಬೇಕು. ಪ್ರತಿ ತಿಂಗಳು ಒಂದು ತಂಡ 10 ಔಷಧಿ ಅಂಗಡಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಬೇಕು. ಜೊತೆಗೆ ವಿವರವಾದ ವರದಿ ನೀಡುವಂತೆ ತಿಳಿಸಿದರು.
ವ್ಯಸನಗಳಿಗೆ ತುತ್ತಾಗುತ್ತಿರುವ ಮಕ್ಕಳ ನಡವಳಿಕೆ ಮತ್ತು ಚಲನವಲನಗಳಲ್ಲಿ ಬದಲಾವಣೆ ಆಗುತ್ತಿರುತ್ತದೆ. ಇದನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಲು ಶಾಲಾ ಕಾಲೇಜುಗಳಲ್ಲಿ ಒಂದು ತಂಡ ರಚನೆ ಮಾಡಬೇಕು. ಮಕ್ಕಳನ್ನು ದುಶ್ಚಟಗಳಿಂದ ಪಾರು ಮಾಡುವಂತೆ ಸೂಚಿಸಿದರು.
ಬಂದಿಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯೂ ವ್ಯಸನಿಗಳಿರುವುದು ಕಂಡು ಬಂದಿದೆ. ಅವರು ಬಂದಿಖಾನೆಯಿಂದ ಹೊರಬಂದ ನಂತರ ಜೀವನ ರೂಪಿಸಿಕೊಳ್ಳಲು ನೆರವಾಗುವಂತೆ 2–3 ತಿಂಗಳ ತರಬೇತಿ ನೀಡಿ. ಸ್ವಯಂ ಉದ್ಯೋಗ ಕೈಗೊಂಡು ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳ ತಪಾಸಣೆ ಸಂದರ್ಭದಲ್ಲಿ, ಏನು ಸಾಗಾಣಿಕೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ನಿಖರವಾಗಿ ಪರಿಶೀಲನೆ ಮಾಡಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಿ
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು. ಮಕ್ಕಳು ವ್ಯಸನಗಳಿಗೆ ತುತ್ತಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಕುಟುಂಬಕ್ಕೆ ನಷ್ಟ ಉಂಟು ಮಾಡುತ್ತಾರೆ. ಸಮಾಜ ಹಾಗೂ ದೇಶದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಾರೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದರು. ಸಕಲೇಶಪುರ ಬೇಲೂರು ಹಾಗೂ ಆಲೂರಿನ ಕಾಫಿ ತೋಟಗಳಿಗೆ ಹೊರ ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರ 18 ವರ್ಷದೊಳಗಿನ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು. ಮಕ್ಕಳನ್ನು ಕೆಲಸಕ್ಕೆ ಕರೆತರವುದನ್ನು ತಡೆಯಲು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಅರಿವು ಕಾರ್ಯಕ್ರಮ ನಡೆಸುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಔಷಧಿ ಅಂಗಡಿಗಳ ಪರಿಶೀಲನೆಗಾಗಿ ರಚಿಸಿರುವ ತಂಡದಲ್ಲಿ ಅರೆಕಾಲಿಕ ಸ್ವಯಂಸೇವಕರನ್ನು ಸೇರ್ಪಡೆ ಮಾಡಬೇಕು. ಮಾದಕ ವಸ್ತುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.–ದಾಕ್ಷಾಯಿಣಿ ಜಿ.ಕೆ., ಹಿರಿಯ ಸಿವಿಲ್ ನ್ಯಾಯಾಧೀಶೆ
ಸಕಲೇಶಪುರ ಭಾಗದಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಹಾಸ್ಟೆಲ್‌ಗಳಲ್ಲಿ ಮಕ್ಕಳ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು.–ಮೊಹಮ್ಮದ್ ಸುಜೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.