ಹೊಳೆನರಸೀಪುರ: ಪಟ್ಟಣದಲ್ಲಿ ಶನಿವಾರ ಪ್ರಥಮ ಬಾರಿಗೆ ನಡೆದ ಹನುಮೋತ್ಸವದಲ್ಲಿ ಸಾವಿರಾರು ಜನರು ಶ್ರದ್ಧಾ ಭಕ್ತಿಯಿಂದ ಭಾಗಿಯಾಗಿದ್ದು, ಜನಮನ ಸೂರೆಗೊಂಡಿತು.
ಬೆಳಿಗ್ಗೆ 9.30ರ ಹೊತ್ತಿಗೆ ಶ್ರೀರಾಮನ ಹಾಗೂ ಹನುಮನ ಬೃಹದಾಕಾರಾದ ಸ್ತಬ್ಧಚಿತ್ರಗಳನ್ನು ಟ್ರ್ಯಾಕ್ಟರ್ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಂತರ ನಗರದ ಗಣ್ಯರು ಹಾಗೂ ಹನುಮೋತ್ಸವ ಸಮಿತಿಯ ಸದಸ್ಯರು ಮೆರವಣಿಗೆಗೆ ಚಾಲನೆ ನೀಡಿದರು.
ಚೆಂಡೆ ವಾದ್ಯ, ಡೊಳ್ಳುಕುಣಿತ, ತಮಟೆ ವಾದ್ಯ, ವೀರಭದ್ರ ಕುಣಿತ, ಗೊಂಬೆ ಕುಣಿತ ಸೇರಿದಂತೆ ಹಲವಾರು ಕಲಾತಂಡದ ಜೊತೆಯಲ್ಲಿ ಮೆರವಣಿಗೆಯು ಕೋಟೆ ಮುಖ್ಯ ರಸ್ತೆ, ರಿವರ್‌ಬ್ಯಾಂಕ್ ರಸ್ತೆ, ಪೇಟೆ ಮುಖ್ಯರಸ್ತೆ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿತು. ಪುರುಷರಿಗಾಗಿ ನಿಯೋಜಿಸಿದ್ದ ಡಿ.ಜೆ ಮುಂದೆ ಸಾವಿರಾರು ಯುವಕರು, ಮಹಿಳೆಯರಿಗಾಗಿ ನಿಯೋಜಿಸಿದ್ದ ಡಿಜೆ ಮುಂದೆ ಸಾವಿರಾರು ಯುವತಿಯರು, ಮಹಿಳೆಯರು ಹನುಮನ ಹಾಗೂ ಶ್ರೀರಾಮನ ಹಾಡುಗಳಿಗೆ ಭಕ್ತಿ ಪರವಶರಾಗಿ ಕುಣಿದು ಕುಪ್ಪಳಿಸಿದರು.
ಮೆರವಣಿಗೆ ಜೊತೆಯಲ್ಲಿ ಸಾಗಿದ ಸಂಸದ ಶ್ರೇಯಸ್ ಪಟೇಲ್ ಹನುಮನ ಹಾಡುಗಳಿಗೆ ನರ್ತಿಸಿ ಗಮನ ಸೆಳೆದರು. ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದ ಸಾವಿರಾರು ಜನರಿಗೆ ಪಲಾವ್ ಮತ್ತು ಮೊಸರನ್ನದ ವ್ಯವಸ್ಥೆ ಮಾಡಲಾಗಿತ್ತು.
ಡಿವೈಎಸ್ಪಿ ಶಾಲು, ಸರ್ಕಲ್ ಇನ್‌ಸ್ಪೆಕ್ಟರ್ ಪ್ರದೀಪ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಅಭಿಜಿತ್, ರಮೇಶ್‌ಕುಮಾರ್, ಸಲ್ಮಾನ್ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು.
ಪುರಸಭಾಧ್ಯಕ್ಷ ಕೆ. ಶ್ರೀಧರ್, ಟಿ. ಶಿವಕುಮಾರ್, ಸ್ಟುಡಿಯೋ ರಂಗ, ಆಡಿಟರ್ ರಾಘವೇಂದ್ರ, ಕಡುವಿನಕೋಟೆ ನಿದರ್ಶನ್, ಲಾರಿ ಕುಮಾರ, ತಟ್ಟೆ ಬಾಬು, ಮನೋಹರ, ಪ್ರದೀಪ್, ಹೇಮಂತ್, ಗೋವಿಂದ, ಭರತ್, ಕಿಶೋರ್, ದಯಾನಂದ, ಸೀನಿ, ಪ್ರಸನ್ನ ಅಯ್ಯಂಗಾರ್, ಭಾವೇಶ್, ಸೇರಿದಂತೆ ಪಟ್ಟಣದ ಬಹುತೇಕ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಸೌಹಾರ್ದಕ್ಕೆ ಸಾಕ್ಷಿಯಾದ ಉತ್ಸವ
ಉತ್ಸವ ಸಾಗುವ ಮಾರ್ಗದುದ್ದಕ್ಕೂ ವಿವಿಧ ಸಮಾಜಗಳಿಂದ ಮಜ್ಜಿಗೆ, ಪಾನಕ, ಚಾಕಲೇಟ್ ತಂಪುಪಾನೀಯ ವಿತರಿಸಲಾಯಿತು. ರಿವರ್ ಬ್ಯಾಂಕ್ ರಸ್ತೆಯಲ್ಲಿ ಸಾಗುವಾಗ ಮುಸ್ಲಿಂ ಸಮುದಾಯದವರು ತಂಪುಪಾನೀಯದ ಬಾಟಲಿಗಳನ್ನು ವಿತರಿಸಿದರು.
ಪತಂಜಲಿ ಯೋಗ ಕೂಟದ ಸದಸ್ಯರು ಶ್ವೇತವರ್ಣದ ಉಡುಗೆ ತೊಟ್ಟು, ಕೇಸರಿ ಪೇಟಾ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಉತ್ಸವದಲ್ಲಿ ಭಾಗವಹಿಸಿದ್ದ ಅಸಂಖ್ಯಾತ ಜನರು ಕೇಸರಿ ಧ್ವಜ ಹಾಗೂ ಕೇಸರಿ ಶಲ್ಯ ಹಾಗೂ ಕೇಸರಿ ವಸ್ತ್ರಗಳನ್ನು ತೊಟ್ಟು ಮೆರವಣಿಗೆಯನ್ನು ಕೇಸರಿಮಯ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.