ADVERTISEMENT

ಜೆಡಿಎಸ್ ಇರೋದು ಮನೆಯವರ ಉದ್ಧಾರಕ್ಕೆ: ಶಾಸಕ ಪ್ರೀತಂ ಗೌಡ ಲೇವಡಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 16:11 IST
Last Updated 21 ನವೆಂಬರ್ 2021, 16:11 IST

ಹಾಸನ: ಜೆಡಿಎಸ್ ಕುಟುಂಬಕ್ಕೆ ಮಾತ್ರ ಸೀಮಿತವಾಗಿರುವ ಪಕ್ಷ. ಕಾರ್ಯಕರ್ತರು ಇರುವುದೇ ಜೀತ ಮಾಡಲು ಎನ್ನುವಂತಾಗಿದೆ ಎಂದು ಸ್ಥಳೀಯ ಶಾಸಕ ಪ್ರೀತಂ ಜೆ. ಗೌಡ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಮಲೆನಾಡು ತಾಂತ್ರಿಕ ಮಹಾ ವಿದ್ಯಾಲಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪ್ರಾದೇಶಿಕ ಪಕ್ಷವಲ್ಲ. ಎರಡು- ಮೂರು ಜಿಲ್ಲೆಗಷ್ಟೇ ಸೀಮಿತವಾಗಿರುವ ಪಕ್ಷ. ಅವರ ಮನೆಯವರ ಉದ್ಧಾರಕ್ಕಾಗಿಯೇ ಪಕ್ಷ ಕಟ್ಟಿಕೊಂಡಿದ್ದಾರೆ. ಗೌಡರ ಕುಟುಂಬ ಇರುವುದೇ ಚುನಾವಣೆಯಲ್ಲಿ ಸ್ಪರ್ಧಿಸಲು. ಅವರಿಗೆ ಮತ ಹಾಕೋದು ಕೇವಲ ಅಪ್ಪ, ಮಕ್ಕಳು, ಮೊಮ್ಮಕ್ಕಳಿಗೆ ಮತ ಹಾಕಿದಂತೆ ಎಂದು ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿ ಈ ಬಾರಿ ಕುಟುಂಬಕ್ಕೆ ಸೀಮಿತವಾಗಿರುವ ಹಾಗೂ ಪ್ರಜಾಪ್ರಭುತ್ವಕ್ಕೆ ಸೀಮಿತವಾಗಿರುವ ಪಕ್ಷಗಳ ನಡುವೆ ಚುನಾವಣೆ ನಡೆಯುತ್ತಿದೆ. ಜೆಡಿಎಸ್ ತಮ್ಮ ಕುಟುಂಬ ದವರಿಗೆ ಮಾತ್ರ ಟಿಕೆಟ್ ನೀಡಿದರೆ, ಬಿಜೆಪಿ ಪ್ರಧಾನ ಮಂತ್ರಿಯಿಂದ ಹಿಡಿದು ತಾಲ್ಲೂಕು ಪಂಚಾಯಿತಿವರೆಗೂ ಕಾರ್ಯಕರ್ತರು, ಮುಖಂಡರನ್ನು ಗುರುತಿಸಿ ಅವಕಾಶ ನೀಡುತ್ತಿದೆ. ಹಾಗಾಗಿ ಈ ಚುನಾವಣೆಯಲ್ಲಿ ಯಾರೂ ಧೃತಿಗೆಡಬೇಕಿಲ್ಲ ಎಂದರು.

ADVERTISEMENT

ಜೆಡಿಎಸ್ ಪಕ್ಷದಲ್ಲಿ ಅವರ ಕುಟುಂಬದವರು ಮಾತ್ರ ಅಧಿಕಾರ ನಡೆಸಬೇಕು, ಕಾರ್ಯಕರ್ತರು ಅವರ ಮನೆ ಜೀತ ಮಾಡಬೇಕಾ ಎಂದು ಪಕ್ಷದವರೇ ರೋಸಿ ಹೋಗಿ ಪ್ರಶ್ನೆ ಮಾಡುತ್ತಿದ್ದಾರೆ. ಆದ್ದರಿಂದ ಅವರ ಕುಟುಂಬಕ್ಕೆ ಬುದ್ಧಿ ಕಲಿಸಲು ಈ ಬಾರಿ ಸ್ವಪಕ್ಷೀಯರೇ ನಿರ್ಧರಿಸಿದ್ದಾರೆ ಎಂದು ಹೇಳಿದರು.

ಈ ಚುನಾವಣೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹೋರಾಟ ಎಂದ ಪ್ರೀತಂ ಗೌಡ, ಬಿಜೆಪಿ ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.