
ಸಂತೋಷ್ ಸಿ.ಬಿ.
ಹಾಸನ: ರಾಜ್ಯ ಸರ್ಕಾರ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಮಹಿಳೆಯರ ಪ್ರಯಾಣದ ನಿಖರ ಮಾಹಿತಿ ಕಲೆ ಹಾಕುತ್ತಿರುವ ಸಾರಿಗೆ ಇಲಾಖೆ, ಮಹಿಳೆಯರಿಗೆ ನಿಗದಿತ ಸ್ಥಳಗಳಿಗೆ ಟಿಕೆಟ್ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಿದೆ.
ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತವಾಗಿದ್ದು, ಬಸ್ ನಿರ್ವಾಹಕರು ಮಹಿಳೆಯರು ಇಳಿಯುವ ಸ್ಥಳಗಳಿಗಿಂತ ಮುಂದಿನ ನಿಲ್ದಾಣದ ಟಿಕೆಟ್‌ಗಳನ್ನು ನೀಡುತ್ತಿದ್ದು, ಇದರಿಂದ ಮಹಿಳೆಯರ ಪ್ರಯಾಣದ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಮಹಿಳೆಯರ ಉಚಿತ ಪ್ರಯಾಣ ಎಷ್ಟರ ಮಟ್ಟಿಗೆ ಸಾಕಾರವಾಗುತ್ತಿದೆ ಎಂಬುದನ್ನು ಸಾರಿಗೆ ಇಲಾಖೆ ಪರಿಶೀಲನೆ ಮಾಡುತ್ತಿದೆ.
ಜೊತೆಗೆ ಎಷ್ಟು ಮಂದಿ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ? ನಿರ್ವಾಹಕರು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಬಗ್ಗೆಯೂ ತಪಾಸಣೆಯ ಸಂದರ್ಭದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ನಾಲ್ಕು ದಿನದಿಂದ ನಿತ್ಯ ಬೆಳಿಗ್ಗೆ 8 ರಿಂದ 10.30 ರವರೆಗೆ ಹಾಸನ ವಿಭಾಗದ ಬಸ್‌ಗಳು ಸಂಚರಿಸುವ ಪ್ರಮುಖ ನಿಲ್ದಾಣಗಳಲ್ಲಿ ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯ 15–20 ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದಾರೆ. ಬಸ್‌ನಿಂದ ಇಳಿಯುವ ಪ್ರತಿ ಮಹಿಳೆಯರ ಟಿಕೆಟ್ ಪರಿಶೀಲನೆ ಮಾಡಲಾಗುತ್ತಿದೆ.
ಟಿಕೆಟ್ ಪರಿಶೀಲನೆ ವೇಳೆ, ಮಹಿಳೆಯರು ಎಲ್ಲಿಂದ ಪ್ರಯಾಣ ಆರಂಭಿಸಿದ್ದರು? ಯಾವ ನಿಲ್ದಾಣದಲ್ಲಿ ಇಳಿಯಲಿದ್ದಾರೆ? ನಿರ್ವಾಹಕರು ಸ್ಟೇಜ್‌ಗೆ ತಕ್ಕಂತೆ ಟಿಕೆಟ್ ವಿತರಿಸಿದ್ದಾರಾ ಎಂಬ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆಯಲಾಗುತ್ತಿದೆ.
ಇನ್ನೂ 3-4 ದಿನ ಈ ರೀತಿಯ ಪ್ರಕ್ರಿಯೆ ನಡೆಯಲಿದ್ದು, ಇದರಿಂದ ನಿರ್ವಾಹಕರು ಮಹಿಳೆಯರಿಗೆ ಬೇಕಾಬಿಟ್ಟಿ ಟಿಕೆಟ್ ನೀಡುವುದು, ಮಹಿಳಾ ಪ್ರಯಾಣಿಕರು ಇಳಿಯುವ ಸ್ಟೇಜ್ ಹೊರತಾಗಿ, ಬದಲಿ ಟಿಕೆಟ್ ನೀಡಿರುವುದು ಸೇರಿದಂತೆ ಅಗತ್ಯ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಪಾಸಣಾ ಸಿಬ್ಬಂದಿ ತಿಳಿಸಿದರು.
ಮಹಿಳಾ ಪ್ರಯಾಣಿಕರು ನಿಗದಿತ ಸ್ಟೇಜ್ ನಲ್ಲಿ ಇಳಿಯದೇ, ಪ್ರಯಾಣದ ನಡುವೆ ಎಲ್ಲಿ ಬೇಕಾದರೂ ಇಳಿಯುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಇಲಾಖೆಗೆ ಹೊರೆ ಆಗುವುದರೊಂದಿಗೆ ಸರಿಯಾದ ಲೆಕ್ಕ ಸಿಗುತ್ತಿಲ್ಲ. ಹೀಗಾಗಿ ಮಾಹಿತಿ ಪಡೆಯುತ್ತಿರುವುದು ಸೂಕ್ತವಾಗಿದೆ ಎಂದು ಮಹಿಳಾ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
‘ಸಾರಿಗೆ ಇಲಾಖೆಗೆ ಸರ್ಕಾರ ಅರ್ಧದಷ್ಟು ಮಾತ್ರ ಹಣ ಸಂದಾಯ ಮಾಡಿದೆ. ಮಹಿಳಾ ಪ್ರಯಾಣಿಕರಿಗೆ ಬೇಕಾಬಿಟ್ಟಿ ಟಿಕೆಟ್ ಕೊಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಪ್ರಯಾಣಿಕರ ಸಂಖ್ಯೆ ಪಡೆಯಲು ಪರಿಶೀಲನೆ ಮಾಡಲಾಗುತ್ತಿದೆ. ಮಾಹಿತಿಯನ್ನು ಕ್ರೋಡೀಕರಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿಗೆ ನೀಡಲಾಗುತ್ತದೆ. ನಂತರ ಸರ್ಕಾರಕ್ಕೆ ಕಳುಹಿಸಲಾಗುತ್ತದೆವಿಶ್ವನಾಥ್ ತಪಾಸಣೆ ಸಿಬ್ಬಂದಿ
ಉಚಿತ ಪ್ರಯಾಣದ ಕುರಿತು ನಿರ್ವಾಹಕರಿಗೆ ಹಾಗೂ ಮಹಿಳಾ ಪ್ರಯಾಣಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮಾಹಿತಿ ಕಲೆ ಹಾಕಲಾಗುತ್ತಿದೆಮಂಜುನಾಥ್ ಹಾಸನ ಬಸ್ ನಿಲ್ದಾಣದ ಮೇಲ್ವಿಚಾರಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.