ADVERTISEMENT

ವಿದೇಶಗಳಲ್ಲಿ ಸಿಲುಕಿದ ಹಾಸನ ಜಿಲ್ಲೆಯ 19 ಮಂದಿ: ಜಿಲ್ಲಾಧಿಕಾರಿ ಲತಾಕುಮಾರಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 4:13 IST
Last Updated 3 ಮಾರ್ಚ್ 2026, 4:13 IST
   

ಹಾಸನ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷದ ಹಿನ್ನೆಲೆಯಲ್ಲಿ ಜಿಲ್ಲೆಯ ಕನಿಷ್ಠ 19 ಮಂದಿ ವಿದೇಶಗಳಲ್ಲಿ ಸಿಲುಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.

ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಬುಧಾಬಿಯಲ್ಲಿ 1, ಬಹರೇನ್‌ನಲ್ಲಿ 10, ದುಬೈನಲ್ಲಿ 7 ಹಾಗೂ ಕುವೈತ್‌ನಲ್ಲಿ 1 ವ್ಯಕ್ತಿ ಸಿಲುಕಿದ್ದಾರೆ ಎಂದರು.

ಯುದ್ದ ಪ್ರದೇಶದಲ್ಲಿ ಸಿಲುಕಿರುವ ಎಲ್ಲರೊಂದಿಗೂ ಸಂಪರ್ಕದಲ್ಲಿದ್ದು, ಜಿಲ್ಲಾಡಳಿತ ತುರ್ತು ನೆರವು ಕೇಂದ್ರಗಳನ್ನು ಸಂಪೂರ್ಣವಾಗಿ ಸಕ್ರಿಯಗೊಳಿಸಿದೆ. ಅಲ್ಲಿ ಇರುವವರ ಮಾಹಿತಿಯನ್ನು ರಾಜ್ಯದ ಕೇಂದ್ರ ಕಚೇರಿಗೆ ಒದಗಿಸಲಾಗಿದೆ ಎಂದು ವಿವರಿಸಿದರು.

ADVERTISEMENT

ವಿದೇಶಗಳಲ್ಲಿ ಸಿಲುಕಿರುವ ಜಿಲ್ಲೆಯವರು ಇದುವರೆಗೂ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಸ್ವತಃ ಕೆಲವರೊಂದಿಗೇ ಮಾತನಾಡಿದ್ದು ಅವರು ಸುರಕ್ಷಿತವಾಗಿ ಇರುವುದನ್ನು ಖಚಿತಪಡಿಸಿದ್ದಾರೆ ಎಂದರು.

ಯಾವುದೇ ಕುಟುಂಬಗಳು ಆತಂಕ ಪಡುವ ಅಗತ್ಯವಿಲ್ಲ. ವಿಶೇಷವಾಗಿ ತಹಶೀಲ್ದಾರ್ ಹಾಗೂ ಹಿರಿಯ ಅಧಿಕಾರಿಗಳು ಅವರೊಂದಿಗೆ ನೇರ ಸಂಪರ್ಕದಲ್ಲಿದ್ದು, ಕೆಲವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಯಾವುದೇ ತೊಂದರೆ ಹಾಗೂ ವಿಶೇಷ ನೆರವು ಅಗತ್ಯವಿದೆಯೇ ಎಂಬುದನ್ನು ವಿಚಾರಿಸಿದ್ದು, ಇದುವರೆಗೂ ಯಾವುದೇ ಗಂಭೀರ ಸಮಸ್ಯೆ ಉದ್ಭವಿಸಿಲ್ಲ ಎಂದರು.

ಯುದ್ಧ ಬೀತಿ ಕಡಿಮೆಯಾಗಿ ದೇಶಕ್ಕೆ ಎಲ್ಲರೂ ವಾಪಸ್ ಬರಲು ಕಾಯುತ್ತಿದ್ದಾರೆ. ಎಲ್ಲೆಲ್ಲಿ ಸಿಲುಕಿದ್ದಾರೆ? ಯಾವ ಉದ್ದೇಶಕ್ಕಾಗಿ ಅಲ್ಲಿ ಇದ್ದರು? ಅವರ ಸ್ಥಿತಿ ಏನು? ಎಂಬ ಎಲ್ಲ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಅದೃಷ್ಟವಶಾತ್ ಯಾರೂ ಸಂಕಷ್ಟಕ್ಕೆ ಸಿಲುಕಿಲ್ಲ. ಜಿಲ್ಲಾಡಳಿತದಿಂದ ಅವರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.

ಯಾವುದೇ ಸಹಾಯದ ಅಗತ್ಯ ಉಂಟಾದರೆ ತಕ್ಷಣ ನಮ್ಮನ್ನು ಸಂಪರ್ಕಿಸಬಹುದಾಗಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತುರ್ತು ಸಂಪರ್ಕ ಸಂಖ್ಯೆಗಳನ್ನು ಪ್ರಕಟಿಸಿದ್ದೇವೆ. ಅಧಿಕಾರಿಗಳು ವೈಯಕ್ತಿಕವಾಗಿ ಪ್ರತಿಯೊಬ್ಬರ ಸಂಪರ್ಕ ಸಂಖ್ಯೆಗಳನ್ನು ಸಂಗ್ರಹಿಸಿ ನಿಯಮಿತವಾಗಿ ಅವರೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.