ADVERTISEMENT

ಕನಕಪುರ, ವರುಣ ಕ್ಷೇತ್ರಕ್ಕಿಂತ ಅರಸೀಕೆರೆಯಲ್ಲಿ ಹೆಚ್ಚು ಅಭಿವೃದ್ಧಿ: ಡಿಕೆಶಿ

ಅಭಿನಂದನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 9:45 IST
Last Updated 26 ಜುಲೈ 2025, 9:45 IST
<div class="paragraphs"><p>ಡಿ.ಕೆ ಶಿವಕುಮಾರ್</p></div>

ಡಿ.ಕೆ ಶಿವಕುಮಾರ್

   

ಹಾಸನ: ಅರಸೀಕೆರೆ ತಾಲ್ಲೂಕಿನ ಜನರು ಶಾಸಕರು ಮತ್ತು ಸಂಸದರನ್ನು ಆಯ್ಕೆ ಮಾಡುವ ಮೂಲಕ ಎರಡು ಕಣ್ಣುಗಳನ್ನು ಕೊಟ್ಟಿದ್ದೀರಿ. ಕನಕಪುರ ಹಾಗೂ ವರುಣ ಕ್ಷೇತ್ರಕ್ಕಿಂತ ಹೆಚ್ಚು ಕೆಲಸಗಳನ್ನು ಅರಸೀಕೆರೆ ಕ್ಷೇತ್ರಕ್ಕೆ ಶಿವಲಿಂಗೇಗೌಡರು ಮಾಡಿಸಿದ್ದಾರೆ. ಕನಕಪುರದಲ್ಲಿ ಎಂಜಿನಿಯರಿಂಗ್, ಡಿಪ್ಲೊಮಾ ಕಾಲೇಜುಗಳಿಲ್ಲ. ಎತ್ತಿನಹೊಳೆ, ಹೇಮಾವತಿ ನೀರು ಕೊಡಲೇಬೇಕು ಎಂದು ಸಚಿವ ಸಂಪುಟದಲ್ಲಿ ಅನುಮೋದನೆ ಕೊಡಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಅರಸೀಕೆರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೀಷ್ಮ ಧರ್ಮರಾಯನಿಗೆ ಒಂದು ಮಾತು ಹೇಳುತ್ತಾರೆ. ತಂದೆ–ತಾಯಿ, ಗುರು, ದೇವರು, ಪ್ರಜೆಗಳ ಋಣ ತೀರಿಸಬೇಕು. ಮಲ್ಲಿಕಾರ್ಜುನ ಖರ್ಗೆ ಅವರು 371ಜೆ ಮೂಲಕ ಋಣ ತೀರಿಸಿದಂತೆ, ಶಾಸಕ ಶಿವಲಿಂಗೇಗೌಡರು ಮತದಾರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ADVERTISEMENT

ಯೋಗಿ ಅನ್ನಿಸಿಕೊಳ್ಳುವ ಮೊದಲು, ಉಪಯೋಗಿ ಅನ್ನಿಸಿಕೊಳ್ಳಬೇಕು. ನಾವು ಮಾಡುವ ಕೆಲಸಗಳಿಂದ ಜನರ ಹೃದಯ ಗೆಲ್ಲುವ ಕೆಲಸ ಮಾಡಬೇಕು. ಕೆರೆಗಳಿಗೆ ನೀರು ತುಂಬಿಸಬೇಕು. ನೀರಾವರಿ ಆಗಬೇಕು ಎಂದು ಪಟ್ಟು ಹಿಡಿದ ಶಿವಲಿಂಗೇಗೌಡರು, ಈ ಎಲ್ಲ ಯೋಜನೆಗಳನ್ನು ಉದ್ಘಾಟಿಸಿದ್ದಾರೆ ಎಂದರು.

ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಕೂಡ ಮುಖ್ಯ. ಶಿವಲಿಂಗೇಗೌಡರ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ್ದೀರಿ. ಇಡೀ ರಾಜ್ಯಕ್ಕೆ ದೊಡ್ಡ ಸಂದೇಶ ಕೊಟ್ಟಿದ್ದೀರಿ. ಜಿಲ್ಲೆಯಲ್ಲಿ ಒಬ್ಬರೇ ಗೆದ್ದಿರಬಹುದು. ಆದರೆ, ಶಿವಲಿಂಗೇಗೌಡ, ಶ್ರೇಯಸ್‌ ಪಟೇಲ್‌ ಹಾಗೂ ಕಾಂಗ್ರೆಸ್‌ ನಾಯಕರ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳನ್ನು ಗೆಲ್ಲುವ ಆತ್ಮವಿಶ್ವಾಸವಿದೆ ಎಂದು ಹೇಳಿದರು.

ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮೂಲಕ ಶಿವಲಿಂಗೇಗೌಡರು ಹತ್ತಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇಲ್ಲಿ ಯಾರೂ ಶಾಶ್ವತ ಅಲ್ಲ. ಮಾಡಿರುವ ಕೆಲಸಗಳು ಮಾತ್ರ ಶಾಶ್ವತವಾಗಿ ಇರುತ್ತವೆ. ಆ ಕೆಲಸವನ್ನು ಶಿವಲಿಂಗೇಗೌಡರು ಮಾಡುತ್ತಿದ್ದಾರೆ ಎಂದರು.

ಬಿಜೆಪಿಯವರು ಭಾವನೆ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನಮಗೆ ದೇವರು ಇಲ್ಲವೇ? ನಮಗೆ ದೇವರ ಮೇಲೆ ನಂಬಿಕೆ ಇಲ್ಲವೇ? ದೇವರು, ಧರ್ಮ ಕೇವಲ ಬಿಜೆಪಿಯವರ ಆಸ್ತಿಯಲ್ಲ. ಎಲ್ಲ ಧರ್ಮವನ್ನು ಕಾಪಾಡಬೇಕು ಎಂಬ ಉದ್ದೇಶದಿಂದ ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಹೇಳಿದರು.

ಅರಸೀಕೆರೆಯಲ್ಲಿ ಅಭಿನಂದನಾ ಸಮಾವೇಶ

ಆರ್. ಅಶೋಕ್‌, ಬಿ.ಎಸ್. ಯಡಿಯೂರಪ್ಪ, ಬಸವರಾಜ್‌ ಬೊಮ್ಮಾಯಿ ಅವರು ಈ ರೀತಿ ಯಾವುದೇ ಕಾರ್ಯಕ್ರಮ ನೀಡಿದ್ದಾರೆಯೇ? ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನು ಅಲ್ಲ. ಈಗ ಅವರ ಜೊತೆಗೆ ಜೆಡಿಎಸ್‌ನವರು ಸೇರಿದ್ದಾರೆ. ಇಬ್ಬರಲ್ಲ, ಎಷ್ಟು ಜನರು ಸೇರಿದರೂ, 2028 ರಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿಕ್ಷಣ, ರಸ್ತೆ, ನೀರು, ನೀರಾವರಿ ಸೇರಿದಂತೆ ಜನರ ಬದುಕು ಹಸನು ಮಾಡಲು, ಶಿವಲಿಂಗೇಗೌಡರ ಆಸೆಯಂತೆ ನಿಮ್ಮ ಋಣ ತೀರಿಸುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಮಾಡುತ್ತಿದ್ದೇವೆ ಎಂದರು.

ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಪುತ್ರ, ಬಸವರಾಜ ಬೊಮ್ಮಾಯಿ ಪುತ್ರ ಸ್ಪರ್ಧಿಸಿದ್ದರು. ಡಬಲ್‌ ಎಂಜಿನ್‌ ಸರ್ಕಾರ ಇತ್ತಲ್ಲ? ಏಕೆ ಗೆಲ್ಲಲಿಲ್ಲ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.