ADVERTISEMENT

ಹಾಸನ: ಜಿಲ್ಲೆಯಲ್ಲಿ ವರುಣನ ಆರ್ಭಟ, ಹೇಮೆಗೆ ಒಂದೇ ದಿನ 5 ಅಡಿ ನೀರು

ಭರ್ತಿ ಹಂತಕ್ಕೆ ವಾಟೆಹೊಳೆ ಜಲಾಶಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 13:01 IST
Last Updated 6 ಆಗಸ್ಟ್ 2020, 13:01 IST
ಹಾಸನದಲ್ಲಿ ಮಳೆ ಸುರಿದ ವೇಳೆ ಕೊಡೆ ಹಿಡಿದು ಸಾಗಿದ ಮಹಿಳೆಯರು.
ಹಾಸನದಲ್ಲಿ ಮಳೆ ಸುರಿದ ವೇಳೆ ಕೊಡೆ ಹಿಡಿದು ಸಾಗಿದ ಮಹಿಳೆಯರು.   

ಹಾಸನ: ಜಿಲ್ಲೆಯಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳು ಜಲಾವೃತ್ತವಾಗಿ ಸಂಚಾರ ಕಷ್ಟವಾಗಿದೆ. ಆಲೂಗಡ್ಡೆ, ರಾಗಿ, ಮುಸುಕಿನ ಜೋಳ ಬೆಳೆ ನೀರಿನಲ್ಲಿ ಮುಳುಗಿದ್ದು, ರೈತರು ಕಂಗಲಾಗಿದ್ದಾರೆ.

ಬೇಲೂರು, ಅರಕಲಗೂಡು, ಸಕಲೇಶಪುರ, ಆಲೂರು, ಹಾಸನ ತಾಲ್ಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು,
ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು. ವಾಹನ ಸವಾರರು ಪರದಾಡಿದರು. ಜನರು ಮನೆಯಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ ಚಿಲ್ಕೂರು ಮತ್ತು ಬಳ್ಳೂರು ಗ್ರಾಮದ ಸಚಿನ್, ಸ್ವಾಮಿಗೌಡ ಎಂಬುವವರಿಗೆ ಸೇರಿದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಹಾನಿಯಾಗಿದೆ.

ADVERTISEMENT

ಜಲಾನಯನ ಪ್ರದೇಶಗಳಾದ ಮೂಡಿಗೆರೆ, ಸಕಲೇಶಪುರದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳ ಹರಿವು 36,849 ಕ್ಯುಸೆಕ್‌ಗೆ ಏರಿದೆ. 2922 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 2906 ಅಡಿ ನೀರು ಸಂಗ್ರಹವಾಗಿದ್ದು, ಒಂದೇ ದಿನ ಐದು ಅಡಿ ನೀರು ಸಂಗ್ರಹವಾಗಿದೆ.

ಬೇಲೂರಿನಲ್ಲಿರುವ 3.6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಯಗಚಿ ಜಲಾಶಯ ಭರ್ತಿಯಾಗಿದೆ. ಐದು ಕ್ರೆಸ್ಟ್‌ ಗೇಟ್‌ಗಳ ಮೂಲಕ 3,700 ಕ್ಯುಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ.

‌ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯದ ಸುತ್ತಮತ್ತಲಿನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಶೀಘ್ರ ಜಲಾಶಯ ಭರ್ತಿಯಾಗುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಕೆಳಭಾಗ, ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವಾಗಬೇಕು ಎಂದು ವಾಟೆಹೊಳೆ ಯೋಜನೆ ಉಪವಿಭಾಗಾಧಿಕಾರಿ ಸಂದೀಪ್‌ ತಿಳಿಸಿದ್ದಾರೆ.

ಅರಕಲಗೂಡು ತಾಲ್ಲೂಕಿನಲ್ಲಿರುವ ಕಟ್ಟೆಪುರ ಜಲಾಶಯದ ಒಳ ಹರಿವು ಏರಿಕೆಯಾಗಿದೆ.

ಸಕಲೇಶಪುರ ಪಟ್ಟಣದಲ್ಲಿ ಹಾದು ಹೋಗಿರುವ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಹೊಳೆ ಮಲ್ಲೇಶ್ವರಸ್ವಾಮಿ
ದೇವಾಲಯ ಜಲಾವೃತವಾಗಿದೆ. ಪ್ರವಾಹ ಭೀತಿ ಎದುರಾಗಿದ್ದು, ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆ ಹಿನ್ನೆಲ್ಲೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪುರಸಭೆ ಅಧಿಕಾರಿಗಳುಆಜಾದ್ ರಸ್ತೆಯ ಮನೆಗಳ ಸ್ಥಳಾಂತರಕ್ಕೆ ಸೂಚಿಸಿದರು.

ತಾಲ್ಲೂಕಿನ ಹೆಗ್ಗದ್ದೆ ಗ್ರಾಮದಲ್ಲಿ 310 ಮಿ.ಮೀ. ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಮಳೆ, ಗಾಳಿಗೆ ವಿದ್ಯುತ್ ಕಂಬ, ಬೃಹತ್ ಮರಗಳು ಧರೆಗುರುಳಿವೆ. ನದಿ, ತೊರೆ, ಕೆರೆ ಕಟ್ಟೆಗಳ ಸಮೀಪ ನೆಲೆಸಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಗುಡ್ಡ‌ ಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.