ADVERTISEMENT

ಕುರಿ, ಕೋಳಿ, ಬೆಣ್ಣೆ ವ್ಯಾಪಾರ ಜೋರು

ಬೇರೆ ಊರುಗಳಿಂದಲೂ ಹೊಳೆನರಸೀಪುರ ಸಂತೆಗೆ ಬರುವ ಜನ

ಎಚ್.ವಿ.ಸುರೇಶ್ ಕುಮಾರ್‌
Published 6 ಜುಲೈ 2022, 3:56 IST
Last Updated 6 ಜುಲೈ 2022, 3:56 IST
ಹೊಳೆನರಸೀಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ನಡೆಯುವ ಸಂತೆಯಲ್ಲಿ ಕುರಿ, ಟಗರು, ಆಡುಗಳನ್ನು ಖರೀದಿಸಲು ಸೇರಿರುವ ಜನರು.
ಹೊಳೆನರಸೀಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ನಡೆಯುವ ಸಂತೆಯಲ್ಲಿ ಕುರಿ, ಟಗರು, ಆಡುಗಳನ್ನು ಖರೀದಿಸಲು ಸೇರಿರುವ ಜನರು.   

ಹೊಳೆನರಸೀಪುರ: ಸೋಮವಾರ ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆ ಕುರಿ, ಟಗರು, ಆಡು, ಹೋತ, ಹ್ಯಾಟೆ ಕೋಳಿ, ಹುಂಜಗಳ ಜೊತೆಗೆ ಅತ್ಯುತ್ತಮವಾದ ಎಮ್ಮೆ ಬೆಣ್ಣೆ ಹಾಗೂ ಹಸುವಿನ ಬೆಣ್ಣೆ ಯಥೇಚ್ಛವಾಗಿ ಮಾರಾಟ ಆಗುತ್ತದೆ.

ಇವುಗಳನ್ನು ಖರೀದಿಸಲು ಬಯಸುವರು ಪ್ರತಿ ಸೋಮವಾರ ಬೆಳಿಗ್ಗೆ 7 ರಿಂದ 10 ಗಂಟೆಗೆ ಮುನ್ನ ಹೊಳೆನರಸೀಪುರದ ಸೋಮವಾರದ ಸಂತೆಗೆ ಬರಬೇಕು. ಈ ಸೋಮವಾರ ನಡೆದ ಸಂತೆಯಲ್ಲಿ ಬಕ್ರೀದ್ ಹಬ್ಬಕ್ಕೆ ಕುರಿ, ಟಗರನ್ನು ಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಕುರಿ, ಟಗರು ವ್ಯಾಪಾರ ಸ್ಥಳದಲ್ಲಿ ಜನ ಕಿಕ್ಕಿರಿದು ತುಂಬಿದ್ದರು.

ನಿತ್ಯದ ಸಂತೆಯಲ್ಲಿ 15 ಕೆ.ಜಿ. ತೂಕದ ಟಗರು ₹9 ಸಾವಿರಕ್ಕೆ ಮಾರಾಟ ಆಗುತ್ತಿತ್ತು, ಬಕ್ರೀದ್‌ಗೂ ಮುನ್ನ ನಡೆದ ಸಂತೆಯಲ್ಲಿ 15 ಕೆ.ಜಿ. ತೂಕದ ಟಗರು ₹12 ರಿಂದ ₹ 13 ಸಾವಿರಕ್ಕೆ ಮಾರಾಟವಾಯಿತು. ಸಾವಿರಾರು ಕುರಿ, ಟಗರು, ಆಡುಗಳು ಮಾರಾಟವಾಯಿತು. ನೂರಾರು ಗ್ರಾಹಕರು, ಇವರ ನಡುವೆ ಸಂತೆಗೆ ಬರಿಗೈಲಿ ಬಂದು ₹3–4 ಸಂಪಾದಿಸಿಕೊಳ್ಳುವ ಮಧ್ಯವರ್ತಿಗಳಿಗೆ ಈ ಸಂತೆ ಗಳಿಕೆಗೆ ಅವಕಾಶ ನೀಡುತ್ತಿದೆ. ಮದ್ಯವರ್ತಿಗಳು ರೈತರಿಂದ ಗ್ರಾಹಕರಿಗೆ ಕುರಿಗಳನ್ನು ಕೊಡಿಸಿ, ಒಂದು ಕುರಿಗೆ ₹100 ರಿಂದ ₹200 ನಂತೆ ₹2 ರಿಂದ ₹3 ಸಾವಿರ ಜೀವನ ನಿರ್ವಹಣೆ ಮಾಡುತ್ತಾರೆ.

ADVERTISEMENT

ಕೋಳಿ ವ್ಯಾಪಾರದ ಲಾಭ ಮತ್ತೊಂದು ರೀತಿ. ತಾಲ್ಲೂಕಿನಲ್ಲಿ ನಾಟಿ ಕೋಳಿ ಸಾಕುವ ಅನೇಕರು ಕೋಳಿ ಮಾರಾಟ ಮಾಡಲು ಸಂತೆಗೆ ಬರುತ್ತಾರೆ. ಕೆಲವರು ಇವರಿಂದ ಕೋಳಿಗಳನ್ನು ಕಡಿಮೆ ದರಕ್ಕೆ ಖರೀದಿಸಿ ಬೆಂಗಳೂರು, ಮೈಸೂರು, ಹಾಸನದಿಂದ ತಡವಾಗಿ ಬರುವ ವ್ಯಾಪಾರಿಗಳಿಗೆ ಮಾರಿ ಲಾಭ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಾರೆ.

ಹೊಳೆನರಸೀಪುರದ ಬೆಣ್ಣೆ ರುಚಿಯಾಗಿದ್ದು, ಸಂತೆ ದಿನ ಇಲ್ಲಿನ ಸುಭಾಸ್ ವೃತ್ತ ಹಾಗೂ ಇನ್ನೂ ಉದ್ಘಾಟನೆ ಆಗದ ಒಕ್ಕಲಿಗರ ಕಲ್ಯಾಣ ಮಂಟಪದ ಮುಂದೆ ಹಳ್ಳಿಯ ಜನರು ಬೆಣ್ಣೆ ಮಾರಾಟ ಮಾಡುತ್ತಾರೆ. 320 ಗ್ರಾಂನ ಒಂದು ಉಂಡೆ ಎಮ್ಮೆ ಬೆಣ್ಣೆ ₹160 ರಿಂದ ₹180 ವರೆಗೂ ಮಾರಾಟ ಆಗುತ್ತದೆ. ಹಸುವಿನ ಬೆಣ್ಣೆ ₹200 ರಿಂದ ₹220ರವರೆಗೆ ಮಾರಾಟವಾಗುತ್ತದೆ.

ಕೆಲವರು ತರುವ 1 ಬೆಣ್ಣೆ ಉಂಡೆ 400 ರಿಂದ 450 ಗ್ರಾಂ ತೂಗುವಂತಿದ್ದು, ಇಂತಹ ಬೆಣ್ಣೆ ಬೇಗ ಮಾರಾಟ ಆಗಿ ಬಿಡುತ್ತದೆ. ಹಾಸನ, ಮೈಸೂರು, ಬೆಂಗಳೂರು, ದಾವಣಗೆರೆಯಿಂದಲೂ ಬೆಣ್ಣೆ ಖರೀದಿಸಲು ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.