ADVERTISEMENT

ಹಳೇಬೀಡು: ವೈಭವದ ಹೊಯ್ಸಳೇಶ್ವರ ರಥೋತ್ಸವ

ಹಳೇಬೀಡು: ದೇವಾಲಯದಲ್ಲಿ ಮೋಳಗಿದ ವಾದ್ಯ ವೈಭವ, ಮಂತ್ರ ಘೋಷ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 1:38 IST
Last Updated 11 ನವೆಂಬರ್ 2025, 1:38 IST
ಹಳೇಬೀಡಿನಲ್ಲಿ ಸೋಮವಾರ ನಡೆದ ಹೊಯ್ಸಳೇಶ್ವರ ರಥೋತ್ಸವದಲ್ಲಿ ವಿದ್ಯಾರ್ಥಿಗಳು ರಥವನ್ನು ಎಳೆದರು
ಹಳೇಬೀಡಿನಲ್ಲಿ ಸೋಮವಾರ ನಡೆದ ಹೊಯ್ಸಳೇಶ್ವರ ರಥೋತ್ಸವದಲ್ಲಿ ವಿದ್ಯಾರ್ಥಿಗಳು ರಥವನ್ನು ಎಳೆದರು   

ಹಳೇಬೀಡು: ಹೊಯ್ಸಳರ ರಾಜಧಾನಿ ದೋರಸಮುದ್ರ(ದ್ವಾರಸಮುದ್ರ) ಇಂದಿನ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಕಾರ್ತೀಕೋತ್ಸವ ಹಾಗೂ ರಥೋತ್ಸವ ಸೋಮವಾರ ಮಂತ್ರ ಘೋಷ ಹಾಗೂ ವಾದ್ಯ ವೈಭವದಿಂದ ನೆರವೇರಿತು.

ಪುರೋಹಿತರ ವೇದ ಮಂತ್ರ ಘೋಷದೊಂದಿಗೆ ಉತ್ಸವ ಮೂರ್ತಿಗಳಿಗೆ ಪೂಜೆ ನೆರವೇರಿಸಿದ ನಂತರ ಪಲ್ಲಕ್ಕಿಯಲ್ಲಿ ಆರೋಹಣ ಮಾಡಲಾಯಿತು. ಹೊಯ್ಸಳೇಶ್ವರ ದೇವಾಲಯದ ಸುತ್ತ ಮೆರವಣಿಗೆ ಮಾಡಿದ ನಂತರ ಪಲ್ಲಕ್ಕಿ ರಥದ ಸುತ್ತ ಚಲಿಸಿತು. ನಂತರ ಪಾರ್ವತಿ–ಪರಮೇಶ್ವರನನ್ನು ರಥದಲ್ಲಿ ಆರೋಹಣ ಮಾಡಲಾಯಿತು.

ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದ ನಂತರ ರಥ ಎಳೆಯಲಾಯಿತು. ಹೊಯ್ಸಳೇಶ್ವರ ಸ್ವಾಮಿಗೆ ಜೈ, ಹೊಯ್ಸಳೇಶ್ವರ ಸ್ವಾಮಿ ಪಾದ ಗೋವಿಂದ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆಯಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ರಥವನ್ನು ಎಳೆದರು.

ADVERTISEMENT

ಮೆರವಣಿಗೆಯ ವೈಭವ ಹೆಚ್ಚಿಸಲು ಕನ್ನಡ ಸಂಸ್ಕೃತಿ ಇಲಾಖೆಯಿಂದ ವಿವಿಧ ಕಲಾ ತಂಡಗಳನ್ನು ಆಯೋಜಿಸಲಾಗಿತ್ತು.
ಗೊಂಬೆಗಳು ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿದವು. ಡೊಳ್ಳು ಕುಣಿತ ಹಾಗೂ ವಿವಿಧ ವಾದ್ಯ ತಂಡಗಳು ರಥೋತ್ಸವಕ್ಕೆ ಕಳೆ ನೀಡಿದವು.

ಆಗಮಿಕ ಅರ್ಚಕರು ಪೂಜೆ ನೆರವೇರಿಸಿದ ನಂತರ ವಿಶ್ವಕರ್ಮ ಸಮಾಜದವರು ಕದಳಿ ಬಲಿ ಸಮರ್ಪಿಸಿದರು. ನಂತರ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಶಿವಮಂತ್ರ ಪಠಿಸುತ್ತಾ ರಥೋತ್ಸವಕ್ಕೆ ಚಾಲನೆ ನೀಡಿದರು. ರಥದ ಉತ್ಸವ ಹೊಯ್ಸಳೇಶ್ವರ ದೇವಾಲಯದ ಹೊರ ಆವರಣಕ್ಕೆ ಬರುತ್ತಲೇ ಭಕ್ತರು ರಥದ ಬಳಿಗೆ ಬಂದು ಪಾರ್ವತಿ ಪರಮೇಶ್ವರ ದರ್ಶನ ಮಾಡಿ, ಹಣ್ಣುಕಾಯಿ ಪೂಜೆ ಮಾಡಿಸಿದರು.

ರಥೋತ್ಸವದ ಅಂಗವಾಗಿ ಹೊಯ್ಸಳೇಶ್ವರ ದೇವಾಲಯದಲ್ಲಿ ಮುಂಜಾನೆ ನಸುಕಿನ ಇದ್ದರೆ ಪುರೋಹಿತರ ವೇದಮಂತ್ರ ಘೋಷ ಮೊಳಗಿತ್ತು. ಮೂಲ ದೇವರಿಗೆ ಮಹಾಭಿಷೇಕ ನೆರವೇರಿಸಲಾಯಿತು. ನಂತರ ಅಷ್ಟಾವಧಾನ ಸೇವೆ ಸಲ್ಲಿಸಲಾಯಿತು. ಪ್ರಾಕಾರೋತ್ಸವ ನಡೆಸಿ ದೇವರಿಗೆ ಮಹಾಮಂಗಳಾರತಿ ನಡೆಸಲಾಯಿತು. ಮುಖವಾಡ ನಾಗಾಭರಣದೊಂದಿಗೆ ವಿಶೇಷ ಅಲಂಕಾರ ಮಾಡಲಾಗಿದ್ದ, ಗರ್ಭಗುಡಿಯ ಹೊಯ್ಸಳೇಶ್ವರ ಸ್ವಾಮಿಯನ್ನು ಭಕ್ತರು ಕಣ್ತುಂಬಿಕೊಂಡರು.

ಹೊಯ್ಸಳೇಶ್ವರ ದೇವಾಲಯ ಸಮಿತಿ ಕನ್ವೀನರ್ ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್.ಮಧು, ಉಪಾಧ್ಯಕ್ಷೆ ಸುಮಾ ವೆಂಕಟೇಶ್, ಸದಸ್ಯರಾದ ಸಿ.ಆರ್.ಲಿಂಗಪ್ಪ ಪ್ರೇಮಣ್ಣ, ಗೀತಾ ಅರುಣ್, ನಿಂಗಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ.ಹುಲೀಗೌಡ, ರಥೋತ್ಸವ ಸಮಿತಿ ಕಾರ್ಯದರ್ಶಿ ಎಂ.ಸಿ.ಕುಮಾರ್, ನಿರ್ದೇಶಕರಾದ ಎಚ್.ಪರಮೇಶ್, ಕೆ.ಎಂ.ವೀರಣ್ಣ, ರಘುನಾಥ್ ಭಾಗವಹಿಸಿದ್ದರು.

ಹೊಯ್ಸಳೇಶ್ವರ ರಥೋತ್ಸಕ್ಕೆ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು 
ರಥ ಎಳೆದು ಭಕ್ತಿ ತೋರಿದ ಶಾಲಾ ವಿದ್ಯಾರ್ಥಿಗಳು | ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಮೆರವಣಿಗೆಯಲ್ಲಿ ಸಾಗಿದ ಗೊಂಬೆಗಳು | ರಥೋತ್ಸವಕ್ಕೆ ಕಳೆ ತಂದ ಡೊಳ್ಳು ಕುಣಿತ, ವಾದ್ಯ ತಂಡ

ಹೊಯ್ಸಳೇಶ್ವರನ ಪೂಜೆಗೆ ಮನ್ನಣೆ ದೊರಕಲಿ 

ಕಾರ್ತೀಕ ಮಾಸದಲ್ಲಿ ನಡೆಯುವ ಹೊಯ್ಸಳೇಶ್ವರ ರಥೋತ್ಸವ ಪ್ರಮುಖ ಧಾರ್ಮಿಕ ಆಚರಣೆಯಾಗಿದೆ. ಹೊಯ್ಸಳೇಶ್ವರ ದೇವಾಲಯದಲ್ಲಿ ನಡೆಯುವ ಆಚರಣೆಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿವೆ ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಹೊಯ್ಸಳೇಶ್ವರ ದೇವಾಲಯ ವಿಶ್ವ ಪಾರಂಪರಿಕ ತಾಣವಾಗಿದೆ. ಧಾರ್ಮಿಕ ಆಚರಣೆಗಳು ಹಿಂದಿನಿಂದ ನಡೆದು ಬಂದ ಪರಂಪರೆಯಾಗಿವೆ. ಪೂಜಾ ಕಾರ್ಯಗಳಿಗೆ ಸರ್ಕಾರಿ ವ್ಯವಸ್ಥೆ ಕೈಜೋಡಿಸಿದಾಗ ಪಾರಂಪರಿಕ ತಾಣ ಎಂಬ ಹೆಸರಿಗೆ ಅರ್ಥ ಬರುತ್ತದೆ. ದೇವಾಲಯದ ಉತ್ಸವಾದಿ ಕಾರ್ಯಕ್ರಮಗಳು ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಪುರಾತತ್ವ ಮುಜರಾಯಿ ಪ್ರವಾಸೋದ್ಯಮ ಮೊದಲಾದ ಇಲಾಖೆಗಳು ಹೊಯ್ಸಳೇಶ್ವರ ದೇವಾಲಯದ ಧಾರ್ಮಿಕ ಆಚರಣೆಗೆ ಕೈಜೋಡಿಸಬೇಕು ಎಂದು ಸ್ವಾಮೀಜಿ ಹೇಳಿದರು.