ADVERTISEMENT

ಹಾಸನ: ₹8.18 ಲಕ್ಷ ಮೌಲ್ಯದ ವಾಹನ, ನಗದು ವಶ

ಅಂತರರಾಜ್ಯ ಕಾರು ಕಳ್ಳನ ಬಂಧನ: ನಾಲ್ಕು ಕಾರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 13:12 IST
Last Updated 8 ಆಗಸ್ಟ್ 2023, 13:12 IST
ವಶಕ್ಕೆ ಪಡೆದ ಮೊಬೈಲ್‌ಗಳನ್ನು ಪೊಲೀಸ್ ಸಿಬ್ಬಂದಿ ವಾರಸುದಾರರಿಗೆ ಹಸ್ತಾಂತರಿಸಿದರು.
ವಶಕ್ಕೆ ಪಡೆದ ಮೊಬೈಲ್‌ಗಳನ್ನು ಪೊಲೀಸ್ ಸಿಬ್ಬಂದಿ ವಾರಸುದಾರರಿಗೆ ಹಸ್ತಾಂತರಿಸಿದರು.   

ಹಾಸನ: ಅಂತರ ರಾಜ್ಯ ಕಾರು ಕಳ್ಳನನ್ನು ಬಂಧಿಸಲಾಗಿದ್ದು, ₹ 2.75 ಲಕ್ಷ ನಗದು, ₹ 5.43 ಲಕ್ಷ ಮೌಲ್ಯದ 4 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ಕೇರಳದ ಕಣ್ಣೂರು ಜಿಲ್ಲೆಯ ಕೆ.ಎಸ್ ದಿಲೀಶ್ (39) ಬಂಧಿತ ಆರೋಪಿ. ಈತ ಹಾಸನ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿ, ಸಕಲೇಶಪುರ, ಆಲೂರು ತಾಲ್ಲೂಕುಗಳಲ್ಲಿ ಕಳ್ಳತನ ಮಾಡಿದ್ದ ಮಾರುತಿ ಆಮ್ನಿ, ಬುಲೆರೋ, ಆಲ್ಟೋ ಸೇರಿದಂತೆ ನಾಲ್ಕು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಇತರೆ ಕಾರುಗಳನ್ನು ಕಳ್ಳತನ ಮಾಡಿ, ಬಿಡಿ ಭಾಗಗಳನ್ನು ಮಾರಾಟ ಮಾಡಿರುವ ಸಂಬಂಧ ಸುಮಾರು ₹ 2.75 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ADVERTISEMENT

ಈತನ ವಿರುದ್ಧ ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ವಾಹನ ಕಳ್ಳತನ ಪ್ರಕರಣ ದಾಖಲಾಗಿದ್ದು, ಹಲವು ವರ್ಷಗಳಿಂದಲೂ ವಾಹನ ಕಳ್ಳತನ ಮಾಡುತ್ತಿದ್ದ. ಈತನ ಬಳಿ ಇದ್ದ ಡಿಜಿಟಲ್ ಲಾಕ್‌ಗಳನ್ನು ತೆರೆಯುವ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ‌. 2007ರಿಂದ ಈಚೆಗಿನ ಮಾಡೆಲ್‌ನ ವಾಹನಗಳನ್ನೇ ಗುರಿಯಾಗಿಸಿಕೊಂಡು ಈತ ಕಳ್ಳತನ ಮಾಡುತ್ತಿದ್ದ ಎಂದು ಹೇಳಿದರು.

ಈಗ ವಶಕ್ಕೆ ಪಡೆದಿರುವ ನಾಲ್ಕು ವಾಹನಗಳ ಬೆಲೆ ಸುಮಾರು ₹ 5.43 ಲಕ್ಷ ಎಂದು ಅಂದಾಜಿಸಲಾಗಿದೆ. ತನಿಖೆಯ ನಂತರ ಮತ್ತಷ್ಟು ವಾಹನಗಳ ಕಳ್ಳತನದ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಮಂಗಳೂರು ಸೇರಿದಂತೆ ಇತರೆಡೆ ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.

ಮಾಸ್ತಿ ಗೌಡ ಕೊಲೆ– 10 ಜನರ ಬಂಧನ:

ಹಳೆಯ ದ್ವೇಷದ ಹಿನ್ನೆಲೆ ಇತ್ತೀಚೆಗೆ ಜಿಲ್ಲೆಯ ಚನ್ನರಾಯಪಟ್ಟಣದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರೌಡಿಶೀಟರ್ ಮಾಸ್ತಿ ಗೌಡ ಕೊಲೆ ಪ್ರಕರಣ ಸಂಬಂಧ ಎಲ್ಲ 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ಯಾಚೇನಹಳ್ಳಿ ಚೇತನ್, ಕಲಬುರ್ಗಿ ಜೈಲಿನಲ್ಲಿ ಇದ್ದುಕೊಂಡು ತನ್ನ ಸಹಚರರಿಗೆ ಮಾಹಿತಿ ನೀಡುವ ಮೂಲಕ ಮಾಸ್ತಿಗೌಡನನ್ನು ಕೊಲೆ ಮಾಡಿಸಿದ್ದಾನೆ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗೆ ಹಣದ ನೆರವು ನೀಡುತ್ತಿದ್ದ ಚನ್ನರಾಯಪಟ್ಟಣ ಕುವೆಂಪುನಗರದ ರಾಘವೇಂದ್ರ ಹಾಗೂ ಕೊಲೆ ನಡೆಯುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆರೋಪಿ ಹಾಸನದ ಸುಮಂತ್ ಎಂಬುವವರನ್ನು ಇತ್ತೀಚಿಗೆ ಬಂಧಿಸಲಾಗಿದೆ ಎಂದರು.

ಪ್ರಕರಣ ಸಂಬಂಧಪಟ್ಟಂತೆ ಕುಮಾರಸ್ವಾಮಿ, ಶಿವಕುಮಾರ್, ರಾಕೇಶ್, ಸುಮಂತ್, ರಾಹುಲ್, ಯಾಚನಹಳ್ಳಿ ಚೇತನ್, ಸಂದೇಶ್ ಗೌಡ, ಹರೀಶ್, ಭರತ್, ರಾಘವೇಂದ್ರ ಸೇರಿದಂತೆ ಎಲ್ಲ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.

109 ಮೊಬೈಲ್ ವಾರಸುದಾರರ ವಶಕ್ಕೆ

ಸಿಇಐಆರ್ ಪೋರ್ಟಲ್ ಮೂಲಕ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಸುಮಾರು ₹ 12 ಲಕ್ಷ ಮೌಲ್ಯದ 109 ಮೊಬೈಲ್‌ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹತ್ತಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ಇದುವರೆಗೆ 2605 ಮೊಬೈಲ್‌ಗಳ ಕಳ್ಳತನ ಹಾಗೂ ಕಳೆದುಕೊಂಡಿರುವ ಬಗ್ಗೆ ದೂರನ್ನು ದಾಖಲಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 350 ಮೊಬೈಲ್ ಪತ್ತೆ ಮಾಡಲಾಗಿದ್ದು 238 ಮೊಬೈಲ್‌ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ ಎಂದರು. ಈ ಎಲ್ಲ ಮೊಬೈಲ್‌ಗಳನ್ನು ಮಹಾರಾಷ್ಟ್ರ ಕೇರಳ ತಮಿಳುನಾಡು ಹಾಗೂ ರಾಜ್ಯದ ನಾನಾ ಜಿಲ್ಲೆಗಳಿಂದ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಜೂನ್ 22ರಿಂದ ಆಗಸ್ಟ್ 7 ರವರೆಗೆ ಸುಮಾರು 109 ಮೊಬೈಲ್‌ ಪತ್ತೆ ಮಾಡಲಾಗಿದೆ ಎಂದರು. ಉಳಿದಂತೆ 273 ಮೊಬೈಲ್‌ಗಳ ಮಾಹಿತಿ ಇದ್ದು ಈ ಮೊಬೈಲ್‌ಗಳ ಪತ್ತೆಗಾಗಿ ಪ್ರಯತ್ನ ಮುಂದುವರಿದಿದೆ. ಆದಷ್ಟು ಶೀಘ್ರ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.