
ಹಾಸನ: ನಗರದ ಪೆನ್ಷನ್ ಮೊಹಲ್ಲಾ ಠಾಣೆಯ ವ್ಯಾಪ್ತಿಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಬೆಂಗಳೂರಿನ ಗೆಲ್ಲಹಳ್ಳಿಯ ಸೋಹಿಲ್ ಖಾನ್ ಅಲಿಯಾಸ್ ಸಮೀರ್ ಖಾನ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ 250 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಸೆ.15 ರಂದು ಶಾಂತಿನಗರದ ಮನೆಯಲ್ಲಿ ₹8.04 ಲಕ್ಷ ಮೌಲ್ಯದ 134 ಗ್ರಾಂ ಚಿನ್ನಾಭರಣ ಕಳವಾಗಿದ್ದವು. ಈ ಕುರಿತು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಸುಳಿವು ಪತ್ತೆ ಮಾಡಿದ ಪೊಲೀಸರು, ಆತನನ್ನು ಬಂಧಿಸಿದ್ದಾರೆ.
ಸೋಹಿಲ್ ಖಾನ್ ವಿರುದ್ಧ ನಗರದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಎರಡು ಪ್ರಕರಣ, ಕರ್ನಾಟಕದಲ್ಲಿ 27 ಹಾಗೂ ಆಂಧ್ರಪ್ರದೇಶದಲ್ಲಿ 52 ಪ್ರಕರಣಗಳಿವೆ. ಉಡುಪಿ ಜಿಲ್ಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಯಾಗಿದ್ದು, ಬೀದರ ಜಿಲ್ಲೆಯ ಪ್ರಕರಣ ವಜಾ ಆಗಿದೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.
ಬೈಕ್ ಕಳ್ಳನ ಬಂಧನ: 21 ಬೈಕ್ ವಶ
ಹಾಸನ: ಇಲ್ಲಿನ ಬಡಾವಣೆ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣದ ತನಿಖೆ ನಡೆಸಿರುವ ಪೊಲೀಸರು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ದಾಸರಪಲ್ಲಿ ಗ್ರಾಮದ ಚಿತ್ತಪ್ಪ ಗಾರಿ ಆನಂದ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ 21 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಅಕ್ಟೋಬರ್ 26 ರಂದು ನಗರದ ಬಿಎಸ್‌ಎನ್‌ಎಲ್ ಕಚೇರಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳುವಾಗಿತ್ತು. ಈ ಬಗ್ಗೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಒಂದು, ಬೆಂಗಳೂರು ಜಿಲ್ಲೆಯಲ್ಲಿ 5, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.