ADVERTISEMENT

ರಾಜಧಾನಿಯಲ್ಲಿ ಮಾತೃಭಾಷೆ ಮಾತನಾಡುವವರ ಸಂಖ್ಯೆ ಕಡಿಮೆ: ಹಂಪನಹಳ್ಳಿ ತಿಮ್ಮೇಗೌಡ

ಔದ್ಯೋಗಿಕವಾಗಿ ಕನ್ನಡ ಭಾಷೆ ಪ್ರಬಲಗೊಳ್ಳಲಿ

ಕೆ.ಎಸ್.ಸುನಿಲ್
Published 29 ಮಾರ್ಚ್ 2022, 19:30 IST
Last Updated 29 ಮಾರ್ಚ್ 2022, 19:30 IST
ಹಂಪನಹಳ್ಳಿ ತಿಮ್ಮೇಗೌಡ
ಹಂಪನಹಳ್ಳಿ ತಿಮ್ಮೇಗೌಡ   

ಹಾಸನ: ಜಿಲ್ಲಾ 20ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಂಪನಹಳ್ಳಿ ತಿಮ್ಮೇಗೌಡರು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಜಾನಪದ ಕುರಿತು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಸಂಪಾದಿಸಿ ಪ್ರಕಟಿಸಿದ್ದಾರೆ. ಸುಮಾರು 200 ಲೇಖನಗಳು ಪ್ರಕಟವಾಗಿವೆ.

ಸಮ್ಮೇಳನದ ಪ್ರಯುಕ್ತ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

* ಸಮ್ಮೇಳನದ ಅಧ್ಯಕ್ಷರಾಗಿ ರುವುದಕ್ಕೆ ಏನೆನಿಸುತ್ತಿದೆ?
ಅಧ್ಯಕ್ಷನಾಗಿರುವುದು ಸಂತೋಷದ ವಿಷಯ. ಸಾಹಿತ್ಯ, ಜಾನಪದ ಕ್ಷೇತ್ರದಲ್ಲಿ ಮಾಡಿದ ಕೃಷಿಯನ್ನು ಪರಿಗಣಿಸಿ
ಸಮ್ಮೇಳನಾಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಗಿದೆ.

ADVERTISEMENT

* ಬೂವನಹಳ್ಳಿಯಲ್ಲಿ ಸಮ್ಮೇಳನ ನಡೆಯುತ್ತಿರುವ ಬಗ್ಗೆ ಅಭಿಪ್ರಾಯ?
ಸಾಹಿತ್ಯ ಪರಿಷತ್‌ ಅನ್ನು ಹಳ್ಳಿ ಕಡೆಗೆ ಕೊಂಡೊಯ್ಯುವ ಅಗತ್ಯವಿದೆ. ಗ್ರಾಮೀಣ ಜನರಿಂದ ಕನ್ನಡ ಭಾಷೆ, ಸಂಸ್ಕೃತಿ ಉಳಿದಿದೆ. ಸಮ್ಮೇಳನಮಾತ್ರವಲ್ಲ ಪರಿಷತ್‌ ಕಾರ್ಯಕ್ರಮಗಳು ಹಳ್ಳಿಗಳಲ್ಲಿ ನಡೆಸು ಮೂಲಕ ಶಾಲೆ, ಕಾಲೇಜು ವಿದ್ಯಾರ್ಥಿಗಳನ್ನು ಹೆಚ್ಚು ತೊಡಗಿಸಿ ಕೊಳ್ಳಬೇಕು.

* ಸಾಹಿತ್ಯ ಸಮ್ಮೇಳನಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ನಿಮಗೆ ತೃಪ್ತಿಇದೆಯೇ? ಯಾವ ರೀತಿ ಬದಲಾವಣೆ ಬಯಸುತ್ತೀರಿ?

ತೃಪ್ತಿ ಇಲ್ಲ. ಸಮ್ಮೇಳನಗಳಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆಯಾಗುತ್ತವೆ. ಆದರೆ, ಗೋಷ್ಠಿ ಮುಗಿದ ಬಳಿಕ ಅದರ ಬಗ್ಗೆ ಸರ್ಕಾರಯಾವ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾ ಮಟ್ಟದ ಸಮ್ಮೇಳನ ಮಾತ್ರವಲ್ಲ, ಅಖಿಲಭಾರತ ಸಾಹಿತ್ಯ ಸಮ್ಮೇಳನ ನಿರ್ಣಯಗಳು ಜಾರಿ ಆಗುತ್ತಿಲ್ಲ. ಕೇವಲ ಔಪಚಾರಿಕವಾಗುತ್ತಿವೆ. ನಿರ್ಣಯ ಜಾರಿಗೆ ತರಲು ಪರಿಷತ್‌ ಆಸಕ್ತಿ ವಹಿಸಬೇಕು. ಕೆಲ ವಿಚಾರವಾದರೂ ಗಂಭೀರವಾಗಿ ಪರಿಗಣಿಸಬೇಕು.

* ಕನ್ನಡಿಗರಿಗೆ ಉದ್ಯೋಗಾವಕಾಶ ಗಳು ಸಿಕ್ಕಿವೆಯೇ?
ಕನ್ನಡಿಗರಿಗೆ ಹೆಚ್ಚು ಉದ್ಯೋಗ ಅವಕಾಶ ಸಿಗುತ್ತಿಲ್ಲ. ಇಂಗ್ಲಿಷ್‌ ಕಲಿತರೆ ಬದುಕುಎನ್ನುವ ಸ್ಥಿತಿ ತಲುಪಿದ್ದೇವೆ. ಕನ್ನಡಿಗರಿಗೆ ಉದ್ಯೋಗ ಸಿಗಬೇಕಾದರೆ ಕನ್ನಡಭಾಷೆಯನ್ನು ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ ಪ್ರಬಲವಾಗಿ ಮಾಡಬೇಕು.

* ರಾಜ್ಯದಲ್ಲಿ ಕನ್ನಡದ ಸ್ಥಿತಿಗತಿ ಹೇಗಿದೆ?
ಕನ್ನಡದ ಸ್ಥಿತಿ ಅಧೋಗತಿಯಲ್ಲಿದೆ. ಸರ್ಕಾರಿ ಶಾಲೆ ಹೊರತುಪಡಿಸಿ ಖಾಸಗಿ ಶಾಲೆಗಳು ಇಂಗ್ಲಿಷ್ ಶಿಕ್ಷಣ ನೀಡುತ್ತಿವೆ. ಶೈಕ್ಷಣಿಕವಾಗಿ ಕನ್ನಡಬಳಕೆಯಾಗುತ್ತಿಲ್ಲ. ಔದ್ಯೋಗಿಕವಾಗಿ ಮತ್ತು ಆಡಳಿತದಲ್ಲಿ ಕನ್ನಡ ಸಂಪೂರ್ಣ ಬಳಕೆಯಾಗಬೇಕು.

* ಸಮ್ಮೇಳನಗಳಿಂದ ಏನೂ ಪ್ರಯೋಜನವಿಲ್ಲ ಎಂಬ ಆರೋಪಗಳಿವೆ?
ಸಮ್ಮೇಳನಗಳಿಂದ ಪ್ರಯೋಜನವಿಲ್ಲ ಎಂಬುದು ತಪ್ಪು ಕಲ್ಪನೆ. ಕನ್ನಡ ಮನಸ್ಸುಗಳು ಬೆರೆಯುತ್ತವೆ. ಕನ್ನಡ ಬಗ್ಗೆ ಚರ್ಚಿಸುವುದು, ಸಂಭ್ರಮಿಸುವುದೇ ಒಂದು ದೊಡ್ಡ ಸಾಧನೆ.

* ನಗರ ಪ್ರದೇಶಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಯಾಗುತ್ತಿದೆಯೆಲ್ಲಾ?
ಹೌದು. ಅಧ್ಯಯನ ಪ್ರಕಾರ ಬೆಂಗಳೂರು ನಗರದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ 20ರಷ್ಟಿದೆ. ಕರ್ನಾಟಕದಲ್ಲಿ ಉದ್ಯೋಗ ಅರಸಿ ಬಂದವರು ಕನ್ನಡ ಕಲಿಯಬೇಕು.ಪ್ರೀತಿ, ವಿಶ್ವಾಸದಿಂದ ಪರಭಾಷಿಕರಿಗೂ ಕನ್ನಡ ಕಲಿಸಬೇಕು.

* ಯುವ ಬರಹಗಾರರಿಗೆ ಸಲಹೆ ಏನು?
ಯುವ ಬರಹಗಾರರಲ್ಲಿ ಅಧ್ಯಯನ ಕೊರತೆ ಕಾಡುತ್ತಿದೆ. ನಾಲ್ಕು ಕವನಬರೆದಾಕ್ಷಣ, ಎರಡು ಪುಸ್ತಕ ಪ್ರಕಟಿಸಿದರೆ ದೊಡ್ಡ ಸಾಹಿತಿ ಎಂಬಭ್ರಮೆಯಿಂದ ಹೊರ ಬರಬೇಕು. ಹೆಚ್ಚು ಅಧ್ಯಯನ ಮಾಡಿ, ಆಳವಾದ ಜ್ಞಾನ ಪಡೆದಾಗ ಶ್ರೇಷ್ಠ ಸಾಹಿತ್ಯ ಹೊರಹೊಮ್ಮಲು ಸಾಧ್ಯ. ವರ್ಷಕ್ಕೆ 7–8 ಸಾವಿರ ಪುಸ್ತಕಗಳು ಪ್ರಕಟವಾಗುತ್ತವೆ.ಅದರಲ್ಲಿ ಶ್ರೇಷ್ಠ ಸಾಹಿತ್ಯ ತೀರಾ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.