
ಹಳೇಬೀಡು: ಕಾರ್ತೀಕೋತ್ಸವದ ಅಂಗವಾಗಿ ದ್ವಾರಸಮುದ್ರ ಕೆರೆಯಲ್ಲಿ ಸೋಮವಾರ ರಾತ್ರಿ ಗ್ರಾಮ ದೇವತೆ ಕರಿಯಮ್ಮ ಹಾಗೂ ಹೊಯ್ಸಳೇಶ್ವರ ಸ್ವಾಮಿಯ ತೆಪ್ಪೋತ್ಸವ ಸಂಭ್ರಮದಿಂದ ನೆರವೇರಿತು.
ಕೆರೆ ದಡದಲ್ಲಿ ಜಮಾಯಾಸಿದ್ದ ಭಕ್ತರು ಭವ್ಯವಾದ ಅಲಂಕೃತ ಮಂಟಪದಲ್ಲಿ ನಡೆದ ದೇವತೆಗಳ ಜಲವಿಹಾರದ ವೈಭವವನ್ನು ಕಣ್ತುಂಬಿಕೊಂಡರು. ಸಂಜೆ ಸೂರ್ಯಾಸ್ತ ಸಮಯದಲ್ಲಿ ಆರಂಭವಾದ ತೆಪ್ಪೋತ್ಸವ ಕೆರೆಯಲ್ಲಿ ಸುತ್ತಿ ಬರುವ ವೇಳೆಗೆ ಕತ್ತಲೆ ಕವಿದಿತ್ತು. ವಿದ್ಯುತ್ ದೀಪಗಳಿಂದ ಝಗಮಿಸುತ್ತಿದ್ದ ಅಲಂಕೃತ ಮಂಟಪ ಹೊತ್ತ ತೆಪ್ಪದ ಪ್ರತಿಬಿಂಬ ಕೆರೆ ನೀರಿನಲ್ಲಿ ವಿಶಿಷ್ಟವಾಗಿ ಕಂಗೊಳಿಸಿತು.
ಒಂದು ಕಡೆಯಿಂದ ಗ್ರಾಮ ದೇವತೆ ಕರಿಯಮ್ಮ ಹಾಗೂ ಪರಿವಾರ ದೇವತೆಗಳನ್ನು ವಾದ್ಯವೈಭವದೊಂದಿಗೆ ಭಕ್ತರು ಕರೆತಂದರು. ಮತ್ತೊಂದು ಕಡೆಯಿಂದ ಹೊಯ್ಸಳೇಶ್ವರ ಸ್ವಾಮಿಯನ್ನು ಶ್ರದ್ದಾ ಭಕ್ತಿಯಿಂದ ಮೆರವಣಿಗೆಯಲ್ಲಿ ಕರೆತರಲಾಯಿತು.
ಕೆರೆ ಮಧ್ಯದಲ್ಲಿ ತೆಪ್ಪ ನಿಲ್ಲಿಸಿ ಪೂಜೆ ನಡೆಸಲಾಯಿತು. ತೆಪ್ಪ ಕೆರೆ ದಂಡೆಗೆ ತಲುಪಿ ನಂತರ ದೇವತೆಗಳನ್ನು ವಾದ್ಯದೊಂದಿಗೆ ದೇವಾಲಯಗಳಿಗೆ ಬೀಳ್ಕೊಡಲಾಯಿತು.
ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜಾ ವಿಧಾನ ನೆರವೇರಿತು. ಆಗಮಿಕ ಅರ್ಚಕರು ಎಚ್.ಎಸ್.ಸುಬ್ರಹ್ಮಣ್ಯ ವಲ್ಲೀಶ್ ಅರ್ಚಕರಾದ ಉದಯ್ ಕುಮಾರ್, ಕಾರ್ತಿಕ್ ಪೂಜಾ ವಿಧಾನ ನಡೆಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್.ಮಧು, ಉಪಾಧ್ಯಕ್ಷೆ ಸುಮಾ ವೆಂಕಟೇಶ್, ಮುಖಂಡರಾದ ಬಿ.ಎಂ.ಮಲ್ಲಿಕಾರ್ಜುನ, ಕುಮಾರ್.ಎಂ.ಸಿ., ಬಿ.ಎಂ.ಹರೀಶ್, ಛಾಯಾಗ್ರಾಹಕ ಯೊಗೀಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.