ADVERTISEMENT

‘ಸ್ವಾತಿ ನಕ್ಷತ್ರ’ ಐಟಿ ದಾಳಿ ತಡೆಯಲಿಲ್ಲವೇಕೆ?: ರೇವಣ್ಣ ಮಾತಿಗೆ ಮಂಜು ತಿರುಗೇಟು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 16:50 IST
Last Updated 31 ಮಾರ್ಚ್ 2019, 16:50 IST
 ಎ.ಮಂಜು
ಎ.ಮಂಜು    

ಬೇಲೂರು: ‘ತಮ್ಮದು ಸ್ವಾತಿ ನಕ್ಷತ್ರ ನನ್ನನ್ನು ಯಾರೂ ಏನು ಮಾಡಲಾಗುವುದಿಲ್ಲ ಎನ್ನುವವರಿಗೆ ಐಟಿ ದಾಳಿ ತಡೆಯಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ಹಾಸನ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಎ.ಮಂಜು ಸ್ವಾತಿ ಪಾತಿ ಯಾವುದು ನಡೆಯುವುದಿಲ್ಲ. ದೇವರ ರಕ್ಷೆ ನಮ್ಮ ಮೇಲಿದೆ’ ಎಂದು ಸಚಿವ ರೇವಣ್ಣ ಅವರ ಮಾತಿಗೆ ತಿರುಗೇಟು ನೀಡಿದರು.

ತಾಲ್ಲೂಕಿನ ಕನ್ನಾಯಕನಹಳ್ಳಿ, ಕರಗಡ, ಹೊಸಮೇನಹಳ್ಳಿ, ನಾರಾಯಣಪುರ, ಬೆಣ್ಣೂರು, ಹಲ್ಮಿಡಿ, ಹನಿಕೆ ಸಂತೆ, ಹೆಬ್ಬಾಳು ಗ್ರಾಮಗಳಲ್ಲಿ ಭಾನುವಾರ ರೋಡ್‌ ಷೋ ಮೂಲಕ ಪ್ರಚಾರ ನಡೆಸಿದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ರೇವಣ್ಣ ಅವರದ್ದು ಸ್ವಾತಿ ನಕ್ಷತ್ರ ಆದರೆ ಏನು ಬೇಕಾದರೂ ಮಾಡಬಹುದೇ ಎಂದು ಪ್ರಶ್ನಿಸಿದ ಎ.ಮಂಜು ಗುತ್ತಿಗೆದಾರರು, ಅಧಿಕಾರಿ ಗಳ ಮನೆಯ ಮೇಲೆ ಐ.ಟಿ. ದಾಳಿ ಮಾಡಿದರೆ ಜೆಡಿಎಸ್‌ನವರು ಏಕೆ ಪ್ರತಿಭಟಿಸಬೇಕು. ಕುಂಬಳಕಾಯಿ ಕಳ್ಳ ಎಂದರೆ ಇವರೇಕೆ ಮೈ ಮುಟ್ಟಿ ನೋಡಿ ಕೊಳ್ಳಬೇಕು’ ಎಂದು ಹರಿಹಾಯ್ದರು.

ADVERTISEMENT

ಜೆಡಿಎಸ್‌ ಕುಟುಂಬದ ಪಕ್ಷವಾಗಿದೆ. ಕುಟುಂಬದ ಪಕ್ಷ ಬೇಕೋ ರಾಷ್ಟ್ರದ ಪಕ್ಷ ಬೇಕೋ ಎಂಬುದನ್ನು ಜನರೇ ತೀರ್ಮಾನಿಸಲಿ. ದೇಶದ ರಕ್ಷಣೆ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಜನರು ಬಿಜೆಪಿಯನ್ನು ಬೆಂಬಲಿಸಬೇಕು. ಜಿಲ್ಲೆಯ ಜನರ ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಜನರು ಬದಲಾವಣೆ ಬಯಸಿದ್ದಾರೆ. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಪುನಾ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ತಾವು 2ಲಕ್ಷ ಮತಗಳ ಅಂತರದಿಂದ ಜಯಗಳಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸೋಂಬೇರಿ ಎತ್ತುಗಳಿಗೆ ಮತ ನೀಡಬೇಡಿ ಎಂಬ ಪ್ರಜ್ವಲ್‌ ರೇವಣ್ಣ ಅವರ ಮಾತಿಗೆ ಪ್ರತಿಕ್ರಿಯಿಸಿದ ಎ.ಮಂಜು ‘ಪಾಪ ಹುಡುಗ ಇನ್ನೂ ಕಲಿಯುತ್ತಿದ್ದಾನೆ. ಅನುಭವ ಕಡಿಮೆ. ಜೆಡಿಎಸ್‌ನಲ್ಲಿ ಸೂಟ್‌ಕೇಸ್‌ ರಾಜಕಾರಣ ನಡೆಯುತ್ತಿದೆ. ಎಂದು ಹೇಳಿದ್ದು ಪ್ರಜ್ವಲ್‌ಗೆ ಮರೆತು ಹೋಯಿತೇ? ಎಲ್ಲೋ ಒಂದು ಕಡೆ ಮಲಗುವವರು ಸೋಂಬೇರಿಗಳು. ಅದನ್ನು ಜನರು ತೀರ್ಮಾನಿಸುತ್ತಾರೆ’ ಎಂದರು.

ಮೈತ್ರಿ ಲೀಡರ್‌ಗಳ ಮಟ್ಟದಲ್ಲಿ: ‘ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ನವರ ಮೈತ್ರಿ ಲೀಡರ್‌ಗಳ ಮಟ್ಟದಲ್ಲಿ ಆಗಿದೆಯೇ ಹೊರತು ಸ್ಥಳೀಯವಾಗಿ ಕಾಂಗ್ರೆಸ್‌ ಕಾರ್ಯಕರ್ತರ ಅಭಿಪ್ರಾಯ ಪಡೆದಿಲ್ಲ. ಇದರಿಂದಾಗಿ ಬೇಲೂರು ಮತ್ತು ಅರಸೀಕೆರೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ನೋವಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈತ್ರಿ ಲೀಡರ್‌ಗಳ ಅನುಕೂಲಕ್ಕೆ ನಡೆದಿದೆಯೇ ಹೊರತು ಕಾರ್ಯಕರ್ತರ ಅನುಕೂಲಕ್ಕಲ್ಲ. ನೂರರಷ್ಟು ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಪರವಾಗಿದ್ದಾರೆ. ನಾವೂ ಸಹ ಅವರ ಜೊತೆಯಲ್ಲಿದ್ದೇವೆ’ ಎಂದು ತಿಳಿಸಿದರು.

ಶಿವರಾಂ ಕೊಡುಗೆ ಏನು?: ‘ಕಾಂಗ್ರೆಸ್‌ ಪಕ್ಷಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಕೊಡುಗೆ ಏನು? ಶಿವರಾಂ ಅಧ್ಯಕ್ಷರಾಗಿದ್ದಾಗ ಜಿಲ್ಲಾ ಪಂಚಾಯಿತಿ ಯಲ್ಲಿ ಕಾಂಗ್ರೆಸ್‌ ಪಕ್ಷ ಕೇವಲ ಎರಡು ಸ್ಥಾನಗಳಿಸಿತ್ತು. ನಾನು ಮಂತ್ರಿಯಾದಾಗ 16 ಸ್ಥಾನದಲ್ಲಿ ಜಯಗಳಿಸಿದ್ದೆವು. ನಾನು ಕಾಂಗ್ರೆಸ್‌ಗೆ ಎಂದೂ ದ್ರೋಹ ಬಗೆದಿಲ್ಲ. ಶಕ್ತಿಮೀರಿ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ’ ಎಂದು ಶಿವರಾಂ ಮಾತಿಗೆ ತಿರುಗೇಟು ನೀಡಿದರು.

ಪ್ರಚಾರ ಆರಂಭಿಸುವ ಮುನ್ನ ಚನ್ನಕೇಶವ ದೇಗುಲಕ್ಕೆ ಭೇಟಿ ನೀಡಿ ಚನ್ನಕೇಶವ ಮತ್ತು ಸೌಮ್ಯನಾಯಕಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು.

ಮಾಜಿ ಶಾಸಕ ಎಸ್‌.ಎಚ್‌.ಪುಟ್ಟರಂಗನಾಥ್‌ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್‌ ಮನೆಗೆ ಭೇಟಿ ನೀಡಿ ಬೆಂಬಲ ಕೋರಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೊರಟಿಕೆರೆ ಪ್ರಕಾಶ್‌, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಹುಲ್ಲಹಳ್ಳಿ ಸುರೇಶ್‌, ಬಿ.ಕೆ.ಚಂದ್ರಕಲಾ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್‌, ಬೆಣ್ಣೂರು ರೇಣುಕುಮಾರ್‌, ಮುಖಂಡರಾದ ಶಿವಕುಮಾರ್‌, ವಿಜಯಲಕ್ಷ್ಮಿ, ಉಮಾಶಂಕರ್‌, ಅರುಣ್‌ಕುಮಾರ್‌, ಶಶಿಕುಮಾರ್‌, ಎನ್‌.ಆರ್‌.ಸಂತೋಷ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.