ADVERTISEMENT

ಶ್ರವಣಬೆಳಗೊಳ: ಅಹಿಂಸಾ ಸಂದೇಶ ಸಾರಿದ ಮಹಾಪುರುಷ

ಭಗವಾನ್ ಮಹಾವೀರ ತೀರ್ಥಂಕರರ 2624ನೇ ಜನ್ಮಕಲ್ಯಾಣ ಮಹೋತ್ಸವ ಇಂದು

ಬಿ.ಪಿ.ಜಯಕುಮಾರ್‌
Published 10 ಏಪ್ರಿಲ್ 2025, 8:32 IST
Last Updated 10 ಏಪ್ರಿಲ್ 2025, 8:32 IST
ಪದ್ಮಾಸನದ ಭಂಗಿಯಲ್ಲಿರುವ ಭಗವಾನ್‌ ಮಹಾವೀರರು 
ಪದ್ಮಾಸನದ ಭಂಗಿಯಲ್ಲಿರುವ ಭಗವಾನ್‌ ಮಹಾವೀರರು    

ಶ್ರವಣಬೆಳಗೊಳ: ‘ಬದುಕು, ಬದುಕಲು ಬಿಡು’ ಎಂಬ ದಿವ್ಯ ಅಹಿಂಸೆಯ ಶಾಂತಿ ಸಂದೇಶವನ್ನು ಲೋಕಕ್ಕೆ ಸಾರಿದ ಭಗವಾನ್ ಮಹಾವೀರರು, ಜನಿಸಿ 2624 ವರ್ಷಗಳಾಗಿದ್ದು, ಅವರ ಜನ್ಮಕಲ್ಯಾಣೋತ್ಸವ ಗುರುವಾರ ಇಲ್ಲಿ ಮೈದಾಳಲಿದೆ. ಕಲ್ಯಾಣೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳಿಗೆ ಪಟ್ಟಣವು ಸಾಕ್ಷಿಯಾಗಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಪಾಲ್ಗೊಳ್ಳಲಿರುವುದು ವಿಶೇಷ.

ವಿಶ್ವದ ಪ್ರಾಚೀನ ಧರ್ಮಗಳಲ್ಲಿ ಅಹಿಂಸೆಯ ಸಂದೇಶ ಸಾರಿದ ಜೈನ ಧರ್ಮವೂ ಒಂದಾಗಿದ್ದು, ಧರ್ಮದ 24 ತೀರ್ಥಂಕರರಲ್ಲಿ ವರ್ಧಮಾನ ಮಹಾವೀರ ತೀರ್ಥಂಕರ ಕೊನೆಯವರು.

ಬಾಲ್ಯದಿಂದಲೂ ವೈರಾಗ್ಯದ ಕಡೆಗೆ ಹೆಚ್ಚಿನ ಗಮನ ಇದ್ದಿದ್ದರಿಂದ 30ನೇ ವರ್ಷದಲ್ಲಿ ದೀಕ್ಷೆ ಪಡೆದ ಮಹಾವೀರರು ಭಾರತದ ಉದ್ದಗಲಕ್ಕೂ ವಿಹಾರ ಮಾಡುತ್ತ, ಜನತೆಗೆ ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ, ಅನೇಕಾಂತ ಅಪರೀಗ್ರಹಗಳ ಬಗ್ಗೆ ಬೋಧನೆ ಮಾಡಿದರು.

ADVERTISEMENT

ನಿರ್ವಿಕಾರ ಭಾವವುಳ್ಳ ನಿಗ್ರಂಥ ಸಾಧುಗಳಾದ ಮಹಾವೀರರು, ದಟ್ಟವಾದ ಕಾಡು ಮೇಡುಗಳಲ್ಲಿ ನಿರಂತರವಾಗಿ ವಿಹಾರ ಮಾಡುತ್ತ, ಘೋರ ತಪಸ್ಸು ಮಾಡಿ ಕೇವಲಜ್ಞಾನ ಪಡೆದರು. ಜನರ ಆಡು ಭಾಷೆ ಪ್ರಾಕೃತದ ಅರ್ಧಮಾಗಧೀ ಭಾಷೆಯಲ್ಲಿ ಸರಳವಾಗಿ ಧರ್ಮೋಪದೇಶ ಮಾಡಿದರು. ಮೊದಲಿನಿಂದಲೂ ಸಂಯಮ, ವ್ರತಶೀಲರಾಗಿದ್ದರು. ಇವರಲ್ಲಿ ಮೇಲು– ಕೀಳು ಭೇದ ಭಾವ ಇರಲಿಲ್ಲ. ಮನುಷ್ಯ ಮತ್ತೊಬ್ಬರನ್ನು ಗೆಲ್ಲುವುದಕ್ಕಿಂತ, ತನ್ನ ಇಂದ್ರಿಯಗಳ ಮೇಲೆ ಜಯ ಸಾಧಿಸುವುದು ಸರ್ವ ಶ್ರೇಷ್ಠ ಎನ್ನುತ್ತಿದ್ದರು. ಸಮ್ಯಗ್ದರ್ಶನ, ಸಮ್ಯಜ್ಞಾನ, ಸಮ್ಯಕ್ಚಾರಿತ್ರ ಇವುಗಳನ್ನು ರತ್ನತ್ರಯಗಳೆಂದು ಕರೆದಿದ್ದಾರೆ. ಇವೇ ಮೋಕ್ಷ ಮಾರ್ಗಕ್ಕೆ ಸಾಧನಗಳಾಗಿವೆ ಎಂದು ಹೇಳಿದ್ದರು.

ಬಿಹಾರದ ಜೃಂಬಿಕಾ ಗ್ರಾಮದ ಋಜುಕೂಲ ನದಿಯ ದಡದಲ್ಲಿ ಕೇವಲಜ್ಞಾನ ಪಡೆದ ಮಹಾವೀರರ ಪ್ರಥಮ ಸಮವಸರಣ ರಾಜಗೃಹದ ವಿಪುಲಾಚಲ ಪರ್ವತದಲ್ಲಿ ನಡೆದಿದೆ. ಪಾವಾಪುರಿಯಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ಮುಕ್ತಿ ಹೊಂದಿದರು.
-ಪ್ರೊ.ಜೀವಂಧರ್ ಕುಮಾರ್ ಹೊತಪೇಟೆ ಇತಿಹಾಸಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.