ADVERTISEMENT

ವರ್ಷವಾದರು ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸಿಲ್ಲ: ಕೃಷ್ಣಬೈರೇಗೌಡ ಟೀಕೆ

ಕಾಂಗ್ರೆಸ್ ‘ಯುವಪರ್ವ’ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 13:10 IST
Last Updated 20 ಜುಲೈ 2025, 13:10 IST
ಚನ್ನರಾಯಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಯುವಪರ್ವ ಕಾರ್ಯಕ್ರಮವನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು. ರಿಜ್ವಾನ್ ಅರ್ಷದ್, ಕೆ.ಎಂ. ಶಿವಲಿಂಗೇಗೌಡ, ಮಂಜುನಾಥಗೌಡ, ಎಂ.ಎ. ಗೋಪಾಲಸ್ವಾಮಿ, ಸಿ.ಎಸ್. ಪುಟ್ಟೇಗೌಡ, ಶಶಾಂಕ್ ಇದ್ದಾರೆ
ಚನ್ನರಾಯಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಯುವಪರ್ವ ಕಾರ್ಯಕ್ರಮವನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು. ರಿಜ್ವಾನ್ ಅರ್ಷದ್, ಕೆ.ಎಂ. ಶಿವಲಿಂಗೇಗೌಡ, ಮಂಜುನಾಥಗೌಡ, ಎಂ.ಎ. ಗೋಪಾಲಸ್ವಾಮಿ, ಸಿ.ಎಸ್. ಪುಟ್ಟೇಗೌಡ, ಶಶಾಂಕ್ ಇದ್ದಾರೆ   

ಚನ್ನರಾಯಪಟ್ಟಣ: ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ಒಂದು ಗಂಟೆಯಲ್ಲಿ ಮೇಕೆದಾಟು ಯೋಜನೆಗೆ ಮಂಜೂರಾತಿ ದೊರಕಿಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದರು. ಆದರೆ, ಒಂದು ವರ್ಷವಾದರು ಯೋಜನೆಗೆ ಒಪ್ಪಿಗೆ ಕೊಡಿಸಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಟೀಕಿಸಿದರು.

ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಯುವ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಯುವಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ ಬಿಜೆಪಿ ಮತ್ತು ಜೆಡಿಎಸ್‌ನಿಂದ 19 ಸಂಸದರು ಆಯ್ಕೆಯಾಗಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಬಿಜೆಪಿ, ಜೆಡಿಎಸ್ ಸಂಸದರು ಧ್ವನಿಎತ್ತುತ್ತಿಲ್ಲ. ಕನ್ನಡಿಗರಿಂದ ಆಯ್ಕೆಯಾಗಿ ಕನ್ನಡಿಗರನ್ನು ವಂಚಿಸಲಾಗುತ್ತಿದೆ. ಅದೇ ರೀತಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಈವರೆಗೆ 53 ಪೈಸೆ ಸಹ ಬಿಡುಗಡೆಮಾಡಿಲ್ಲ. ಇದನ್ನು ಪ್ರಶ್ನಿಸಲು ಧಮ್ಮು, ತಾಕತ್ತು ಇಲ್ಲದ ಬಿಜೆಪಿ, ಜೆಡಿಎಸ್ ಸಂಸದರು ಕರ್ನಾಟಕದ ದ್ರೋಹಿಗಳು ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕದ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವುದರಿಂದ ಇವರ ವಿರುದ್ಧ ಕೇಂದ್ರ ಸರ್ಕಾರ ಇ.ಡಿ, ಸಿಬಿಐ, ಐ.ಟಿ ದಾಳಿ ಮಾಡಿಸುತ್ತದೆ. ಕರ್ನಾಟಕಕ್ಕೆ ತೆರಿಗೆ ಪಾಲನ್ನು ಸಮರ್ಪಕವಾಗಿ ನೀಡದೇ ತಾರತಮ್ಯ ಎಸಗಲಾಗುತ್ತಿದೆ. ಬಿಹಾರ, ಉತ್ತರಪ್ರದೇಶಕ್ಕೆ ಹೆಚ್ಚು ಪ್ರಮಾಣದಲ್ಲಿ ತೆರಿಗೆಯ ಪಾಲನ್ನು ನೀಡಲಾಗುತ್ತಿದೆ. ಕನ್ನಡ ಭಾಷೆಯನ್ನು ನೇಪಥ್ಯಕ್ಕೆ ಸರಿಸಿ, ಹಿಂದಿ ಭಾಷೆ ಹೇರಲು ಹೊರಟಿದೆ. ಇದನ್ನು ಪ್ರಶ್ನಿಸದ ಜೆಡಿಎಸ್ ಪಕ್ಷ ಬಿಜೆಪಿ ಏಜೆಂಟ್‍ ರೀತಿ ವರ್ತಿಸುತ್ತಿದೆ. ಗುಲಾಮಗಿರಿ ಮಾಡುತ್ತಿದೆ ಎಂದು ದೂರಿದರು.

ADVERTISEMENT

ಎನ್‍ಡಿಎ ಸರ್ಕಾರದ ಲೋಪದ ವಿರುದ್ಧ ರಾಜ್ಯ ಯುವ ಕಾಂಗ್ರೆಸ್ ಹೋರಾಟ ಮಾಡುವ ಮೂಲಕ ಕರ್ನಾಟಕದ ಹಿತ ಕಾಪಾಡಲು ಮುಂದಾಗಬೇಕು. ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಕಷ್ಟು ಅವಕಾಶ ಲಭಿಸುತ್ತದೆ. ಸಂಘಟನೆಯ ಸಾಮರ್ಥ್ಯದಿಂದ ಭವಿಷ್ಯದ ನಾಯಕರಾಗಿ ರೂಪುಗೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆ ಕುರಿತು ಜನರಿಗೆ ತಿಳಿಸುವ ಮೂಲಕ ಮುಂಬರುವ ಗ್ರಾಮೀಣ ಮತ್ತು ನಗರಪ್ರದೇಶದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.

ಬೆಂಗಳೂರು ಶಿವಾಜಿ ನಗರದ ಶಾಸಕ ರಿಜ್ವಾನ್ ಅರ್ಷದ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‍ಗೌಡ, ಕಾಂಗ್ರೆಸ್ ಮುಖಂಡರಾದ ಸಿ.ಎಸ್. ಪುಟ್ಟೇಗೌಡ, ಪ್ರಸನ್ನಕುಮಾರ್ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳಾದ ದಿವ್ಯಾ, ಸುನೀಲ್‍ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್, ಮುಖಂಡರಾದ ಎಂ.ಎ. ಗೋಪಾಲಸ್ವಾಮಿ, ಸಿ.ವಿ. ರಾಜಪ್ಪ, ಎಚ್.ಎಸ್.ವಿಜಯಕುಮಾರ್, ಎ.ಇ. ಚಂದ್ರಶೇಖರ್, ಎ.ಸಿ.ಆನಂದಕುಮಾರ್, ಎಚ್.ಕೆ. ಮಹೇಶ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಶಾಂಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಮಂಜೇಗೌಡ, ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್. ಮೂರ್ತಿ ಇದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದಲ್ಲಿ ಬೈಕ್  ರ‍್ಯಾಲಿ ನಡೆಸಲಾಯಿತು.

ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ. ಆದರೆ ಹಣಕಾಸು ಸ್ಥಿತಿ ಚೆನ್ನಾಗಿಲ್ಲವೆಂದು ಟೀಕಿಸುವ ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಬರಲಿ
ಕೆ.ಎಂ. ಶಿವಲಿಂಗೇಗೌಡ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.