ADVERTISEMENT

ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಇಲ್ಲ: ಸೂರಜ್‌ ರೇವಣ್ಣ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 11:23 IST
Last Updated 14 ನವೆಂಬರ್ 2021, 11:23 IST
ಸೂರಜ್‌ ರೇವಣ್ಣ
ಸೂರಜ್‌ ರೇವಣ್ಣ   

ಹಾಸನ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಆಕಾಂಕ್ಷೆ ಇಲ್ಲ. ತಂದೆ ಎಚ್.ಡಿ. ರೇವಣ್ಣ, ತಾತ ಎಚ್.ಡಿ.ದೇವೇಗೌಡ ಹಾಗೂ ಜಿಲ್ಲೆಯ ಆರು ಶಾಸಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಪುತ್ರ ಡಾ.ಸೂರಜ್ ರೇವಣ್ಣ ತಿಳಿಸಿದರು.

ಹೊಳೆನರಸೀಪುರ ತಾಲ್ಲೂಕಿನ ಗನ್ನಿಕಡದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆ ವೇಳೆಯೂ ನನ್ನ ಹೆಸರು ಕೇಳಿ ಬಂದಿತ್ತು. ಆಮೇಲೆ ಯಾರು ಅಭ್ಯರ್ಥಿ ಆದರು ಎಂಬುದು ಗೊತ್ತಿದೆ. ಈ ಬಾರಿ ಪರಿಷತ್ ಚುನಾವಣೆಗೆ ಯಾರೂ ಅಭ್ಯರ್ಥಿ ಎಂಬುದು ಗೊತ್ತಿಲ್ಲ. ತಾಯಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರುಆಗ್ರಹಿಸಿದ್ದಾರೆ. ನನಗೆ ಹೊಳೆನರಸೀಪುರ ತಾಲ್ಲೂಕಿನ ಎರಡು ಹೋಬಳಿ ಜವಾಬ್ದಾರಿ ನೀಡಲಾಗಿದೆ. ಅಲ್ಲಿಕೆಲಸ ಮಾಡುತ್ತಿದ್ದೇನೆ’ ಎಂದರು.

‘ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಹಿರಿಯ ಮಾರ್ಗದರ್ಶನದಂತೆ ಕೆಲಸ ಮಾಡುತ್ತಿದ್ದೇನೆ.ನನಗೆ ಕಾರ್ಯಕರ್ತರು ಟಿಕೆಟ್‌ ಕೊಡಿ ಎಂದು ಕೇಳಲು ಹೋಗಿಲ್ಲ. ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಶೇ 70ರಷ್ಟು ಕಾರ್ಯಕರ್ತರು ಭವಾನಿ ಅಮ್ಮನಿಗೆ ಟಿಕೆಟ್‌ ನೀಡುವಂತೆ ಕೇಳಿದ್ದಾರೆ. ಅವರು ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಕೆಲಸ ಮಾಡಿದ್ದಾರೆ. ಎರಡು, ಮೂರು ದಿನ ಸಮಯ ಇದ್ದು, ಯಾವಾಗ ಬೇಕಾದರೂ ಅಭ್ಯರ್ಥಿ ಹೆಸರು ಘೋಷಣೆ ಮಾಡಬಹುದು’ ಎಂದು ಹೇಳಿದರು.

ADVERTISEMENT

‘ನಾನು ಪಕ್ಷದ ಕಾರ್ಯಕರ್ತ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಹಿಂದಿನ ಚುನಾವಣೆಯಲ್ಲಿ ತಪ್ಪು ಮಾಡಿ ವಿಧಾನ ಪರಿಷತ್‌ ಸದಸ್ಯ ಸ್ಥಾನ ಕಳೆದುಕೊಂಡಿದ್ದೇವೆ. ಈ ಬಾರಿ ಅದನ್ನು ಸರಿಪಡಿಸಿಕೊಳ್ಳಬೇಕು. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.