ADVERTISEMENT

ರಾಜ್ಯ ಹೆದ್ದಾರಿಯಲ್ಲಿ ಗುಂಡಿ: ಸಂಚಾರಕ್ಕೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 16:13 IST
Last Updated 17 ಸೆಪ್ಟೆಂಬರ್ 2024, 16:13 IST
ಗಂಡಸಿ ಹೋಬಳಿಯ ಹೊನ್ನಕುಮಾರನಹಳ್ಳಿ ಸೇತುವೆಯ ಬಳಿ ರಸ್ತೆಯ ಮಧ್ಯಭಾಗದಲ್ಲಿ ಬಿದ್ದಿರುವ ಗುಂಡಿಗಳು
ಗಂಡಸಿ ಹೋಬಳಿಯ ಹೊನ್ನಕುಮಾರನಹಳ್ಳಿ ಸೇತುವೆಯ ಬಳಿ ರಸ್ತೆಯ ಮಧ್ಯಭಾಗದಲ್ಲಿ ಬಿದ್ದಿರುವ ಗುಂಡಿಗಳು   

ಗಂಡಸಿ: ಶಿವಮೊಗ್ಗದಿಂದ ಅರಸೀಕೆರೆ ಮಾರ್ಗವಾಗಿ ಚನ್ನರಾಯಪಟ್ಟಣ ರಾಷ್ಟ್ರೀಯ ಹೆದ್ದಾರಿ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ ಅರಸೀಕೆರೆ - ಗಂಡಸಿ ಹ್ಯಾಂಡ್ ಪೋಸ್ಟ್ ಮಧ್ಯೆ ಕಿತ್ತು ಹೋಗಿದ್ದು, ರಸ್ತೆಯ ಮಧ್ಯದಲ್ಲಿ ಗುಂಡಿಗಳು ರಾರಾಜಿಸುತ್ತಿವೆ.

ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರಿಗೆ ನರಕ ದರ್ಶನದ ಅನುಭವವಾಗುತ್ತಿದೆ. ಗಂಡಸಿ ಹ್ಯಾಂಡ್ ಪೋಸ್ಟ್ - ಅರಸೀಕೆರೆ ಮಾರ್ಗದ ಹೊನ್ನಕುಮಾರನಹಳ್ಳಿ, ಗಂಡಸಿ, ಶನಿದೇವರ ದೇವಾಲಯ, ದಾಸೇನಳ್ಳಿ ಗೇಟ್, ಗೊಲ್ಲರಹಳ್ಳಿ ಗೇಟ್, ಮುದುಡಿ ಶಂಕರನಹಳ್ಳಿ ಬಳಿ ರಸ್ತೆ ಹಾಳಾಗಿದ್ದು, ರಸ್ತೆ ಮಧ್ಯಭಾಗದಲ್ಲಿ ಒಂದೆರಡು ಅಡಿ ಆಳದ ಗುಂಡಿಗಳು ಬಿದ್ದಿವೆ. ಈ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎನ್ನುವ ದೂರು ವಾಹನ ಚಾಲಕರದ್ದು.

ಪಕ್ಕದ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ 19 ಕಿ.ಮೀ. ಉದ್ದದ ರಸ್ತೆ ಹಾಳಾಗಿದ್ದು, ಪ್ರತಿದಿನ ಸಂಚರಿಸುವ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.

ADVERTISEMENT

ಶನಿವಾರ, ಭಾನುವಾರ ಮತ್ತು ಗುರುವಾರ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದು, ಪ್ರವಾಸಿ ತಾಣಗಳಾದ ಮೈಸೂರು, ನಂಜನಗೂಡು, ಮಹದೇಶ್ವರ ಬೆಟ್ಟ, ಶ್ರವಣಬೆಳಗೊಳ, ಮೇಲುಕೋಟೆಗೆ ಹೋಗಲು ಅತಿ ಹೆಚ್ಚು ಪ್ರಯಾಣಿಕರು ಈ ಮಾರ್ಗವನ್ನೇ ಬಳಸುತ್ತಾರೆ.

ರಾಜ್ಯ ಸಾರಿಗೆಗಿಂತ ಖಾಸಗಿ ಬಸ್‌ಗಳು, ದ್ವಿಚಕ್ರ ವಾಹನಗಳು, ಸರಕು ತುಂಬಿದ ವಾಹನಗಳು, ಕಾರುಗಳು ಈ ಮಾರ್ಗವನ್ನೇ ಬಳಸುವುದರಿಂದ ಸಂಚಾರ ದಟ್ಟನೆ ಆಗುತ್ತಿದೆ. ಪ್ರತಿ ಗುರುವಾರ ಗಂಡಸಿ ಹ್ಯಾಂಡ್ ಪೋಸ್ಟ್ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಗೆ ವ್ಯಾಪಾರಸ್ಥರು, ಸಾರ್ವಜನಿಕರು ಅತಿ ಹೆಚ್ಚಾಗಿ ಸೇರುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತದೆ.

ಹೊನ್ನಕುಮಾರನಹಳ್ಳಿ ಬಳಿ ಮಂಡಿ ಉದ್ದದ ಗುಂಡಿಗಳು ಬಿದ್ದಿದ್ದು, ಪ್ರತಿದಿನ ರಾತ್ರಿ ವೇಳೆ ದ್ವಿಚಕ್ರ ವಾಹನಗಳ ಸವಾರರು ಒಂದು ಗುಂಡಿಯನ್ನು ತಪ್ಪಿಸಲು ಹೋಗಿ ಇನ್ನೊಂದು ಗುಂಡಿಗೆ ಬಿದ್ದು ಕೈ ಕಾಲು ಮುರಿದುಕೊಂಡು ಘಟನೆಗಳು ನಡೆದಿವೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ರಸ್ತೆಗಳ ಗುಂಡಿ ಮುಚ್ಚುವಂತೆ ಸ್ಥಳೀಯ ಹಳ್ಳಿಗಳ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.