ADVERTISEMENT

ಹಳೇಬೀಡು: ದೇವಾಲಯದಲ್ಲಿ ನೇಣು ಹಾಕಿಕೊಂಡು ಅರ್ಚಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಮೇ 2025, 14:06 IST
Last Updated 8 ಮೇ 2025, 14:06 IST
ಹಳೇಬೀಡು ಬಳಿಯ ಗಂಗೂರಿನ ದೇವಾಲಯದ ಬಾಗಿಲು ತೆರೆಯಲು ಬಿಡದೇ ಕುಳಿತಿದ್ದ ಅರ್ಚಕನ ಕುಟುಂಬದವರು
ಹಳೇಬೀಡು ಬಳಿಯ ಗಂಗೂರಿನ ದೇವಾಲಯದ ಬಾಗಿಲು ತೆರೆಯಲು ಬಿಡದೇ ಕುಳಿತಿದ್ದ ಅರ್ಚಕನ ಕುಟುಂಬದವರು   

ಹಳೇಬೀಡು: ಮುಜರಾಯಿ ಇಲಾಖೆಗೆ ಸೇರಿದ ಸಮೀಪದ ಗಂಗೂರು ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಅರ್ಚಕ ರಂಗಸ್ವಾಮಿ (60) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಗ್ರಾಮದ ಕೆಲವು ಮಂದಿಯ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯಾಯ ದೊರಕುವವರೆಗೆ ದೇವಾಲಯದ ಬಾಗಿಲು ತೆರೆಯಲು ಬಿಡುವುದಿಲ್ಲ’ ಎಂದು ರಂಗಸ್ವಾಮಿ ಕುಟುಂಬದವರು ಹಾಗೂ ಸಂಬಂಧಿಕರು ಪಟ್ಟು ಹಿಡಿದು ದೇವಾಲಯದ ಜಗುಲಿಯ ಮೇಲೆ ಕುಳಿತಿದ್ದರು. 

ದೇವಾಲಯದ ಬಾಗಿಲು ತೆರೆದು ಮೃತದೇಹ ಹೊರ ತರಲು ಹಳೇಬೀಡು ಪೊಲೀಸರು ಮುಂದಾದಾಗ, ಕುಟುಂಬದವರು ಬಾಗಿಲು ತೆರೆಯಲು ಬಿಡಲಿಲ್ಲ. ಮಧ್ಯಾಹ್ನ 1 ಗಂಟೆಗೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಎಂ.ಮಮತಾ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ADVERTISEMENT

‘ದೇವಾಲಯದಲ್ಲಿ ಸಾವಿನ ಘಟನೆ ನಡೆಯಬಾರದಾಗಿತ್ತು. ದೇವಾಲಯ ಮುಜಾರಾಯಿ ಇಲಾಖೆಗೆ ಸೇರಿದೆ. ಹೆಚ್ಚು ಸಮಯ ದೇವಾಲಯದಲ್ಲಿ ಮೃತದೇಹ ಬಿಡುವಂತಿಲ್ಲ. ದೇವಾಲಯ ಬಾಗಿಲು ತೆಗೆಯಲು ಅವಕಾಶ ಕೊಡಿ’ ಎಂದು ತಹಶೀಲ್ದಾರ್ ತಿಳಿಸಿದರು.

‘ನಮಗೆ ನ್ಯಾಯಬೇಕು. ಕಿರುಕುಳ ನೀಡಿದವರಿಗೆ ಶಿಕ್ಷೆ ಆಗಬೇಕು’ ಎಂದು ಮೃತರ ಕುಟುಂಬದವರು ಪಟ್ಟು ಹಿಡಿದರು. ‘ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಹಳೇಬೀಡು ಪೊಲೀಸರಿಂದ ಕುಟುಂಬಕ್ಕೆ ಭದ್ರತೆ ನೀಡುತ್ತೇವೆ’ ಎಂದು ಮಮತಾ ತಿಳಿಸಿದರು.

ಆದರೂ ದುಃಖದಲ್ಲಿದ್ದ ಕುಟುಂಬದವರು ದೇವಾಲಯದ ಬಾಗಿಲು ತೆಗೆಯಲು ಬಿಡುವುದಿಲ್ಲ ಎಂದು ಹಠ ಹಿಡಿದರು. ಸುದೀರ್ಘ ಮಾತುಕತೆ ನಡೆಸಿದ ನಂತರ ಬಾಗಿಲು ತೆಗೆಯಲು ಕುಟುಂಬದವರು ಅವಕಾಶ ನೀಡಿದರು. ಬಾಗಿಲಿಗೆ ಒಳಗಿನಿಂದ ಬೋಲ್ಟ್ ಹಾಕಿದ್ದರಿಂದ ಬಾಗಿಲು ತೆಗೆಯಲು ಪೊಲೀಸರು ಹರಸಾಹಸ ಪಟ್ಟರು.

ನಂತರ ಮೃತದೇಹ ಹೊರತೆಗೆದು ಹಳೇಬೀಡು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಸಬ್ ಇನ್‌ಸ್ಪೆಕ್ಟರ್‌ಗಳಾದ ಸಿದ್ಧಲಿಂಗ ಬಾನಸೆ ಹಾಗೂ ಯೋಗಾಂಬರಂ ಬಂದೋಬಸ್ತ್ ಮಾಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.