ADVERTISEMENT

ಅರಸೀಕೆರೆ: ಚಿನ್ನಾಭರಣ, ನಗದು ವಾರಸುದಾರರಿಗೆ ಒಪ್ಪಿಸಿದ ರೈಲ್ವೆ ಪೊಲೀಸರು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 4:24 IST
Last Updated 11 ಆಗಸ್ಟ್ 2021, 4:24 IST
ಚಿನ್ನಾಭರಣ ಹಾಗೂ ನಗದು ಹಣವನ್ನು ರೈಲಿನಲ್ಲೇ ಬಿಟ್ಟು ಹೋಗಿದ್ದ ಬೆಂಗಳೂರಿನ ವಿದ್ಯಾ ಕಿರಣ್‌ಕುಮಾರ್ ಅವರಿಗೆ ಅರಸೀಕೆರೆ ರೈಲ್ವೆ ಆರ್‌ಎಸ್ಐ ಮುದಿಯಪ್ಪ ಹಿಂದಿರುಗಿಸಿದರು. ಸಿಬ್ಬಂದಿ ಇದ್ದರು
ಚಿನ್ನಾಭರಣ ಹಾಗೂ ನಗದು ಹಣವನ್ನು ರೈಲಿನಲ್ಲೇ ಬಿಟ್ಟು ಹೋಗಿದ್ದ ಬೆಂಗಳೂರಿನ ವಿದ್ಯಾ ಕಿರಣ್‌ಕುಮಾರ್ ಅವರಿಗೆ ಅರಸೀಕೆರೆ ರೈಲ್ವೆ ಆರ್‌ಎಸ್ಐ ಮುದಿಯಪ್ಪ ಹಿಂದಿರುಗಿಸಿದರು. ಸಿಬ್ಬಂದಿ ಇದ್ದರು   

ಅರಸೀಕೆರೆ: ಪ್ರಯಾಣಿಕರೊಬ್ಬರು ರೈಲಿನಲ್ಲಿ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣ ಹಾಗೂ ನಗದನ್ನು ನಗರದ ರೈಲ್ವೆ ಪೊಲೀಸರು ವಶಕ್ಕೆ ಪಡೆದು ಬಳಿಕ ಅದನ್ನು ವಾರಸುದಾರರಿಗೆ ನೀಡಿ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಗರದ ರೈಲು ನಿಲ್ದಾಣದಲ್ಲಿ ಮಂಗಳವಾರ ರೈಲ್ವೆ ಪೊಲೀಸ್ ಠಾಣೆಯ ಆರ್‌ಎಸ್ಐ ಮುದಿಯಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಂಗಳೂರಿನ ವಿದ್ಯಾ ಕಿರಣ್‌ಕುಮಾರ್ ಅವರು ಸೋಮವಾರ ರಾತ್ರಿ ಬೆಂಗಳೂರು– ಅರಸೀಕೆರೆ ಮಾರ್ಗದ ಮೈಸೂರು ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು. ಬೆಂಗಳೂರಿನಲ್ಲಿ ಇಳಿಯುವಾಗ ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗನ್ನು ಬಿಟ್ಟು ಮನೆಗೆ ತೆರಳಿದ್ದರು. ರೈಲು ಅರಸೀಕೆರೆ ನಿಲ್ದಾಣಕ್ಕೆ ಬರುವ ಮುನ್ನ ಕರೆ ಮಾಡಿ ಮಾಹಿತಿ ನೀಡಿದ್ದರು’ ಎಂದರು.

‌‘ಪೊಲೀಸ್ ಸಿಬ್ಬಂದಿ ವಿನಯ್ ಹಾಗೂ ನಂದೀಶ್, ಸೋಮವಾರ ಮಧ್ಯರಾತ್ರಿ ನಿಲ್ದಾಣಕ್ಕೆ ಬಂದ ಮೈಸೂರು– ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನಲ್ಲಿ ತಪಾಸಣೆ ನಡೆಸಿದಾಗ ಬ್ಯಾಗ್ ಪತ್ತೆಯಾಗಿದ್ದು ಸುಮಾರು ₹ 45 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು ₹ 15 ಸಾವಿರ ನಗದು ಇತ್ತು. ಮಂಗಳವಾರ ರೈಲ್ವೆ ಪೊಲೀಸ್ ಠಾಣೆಗೆ ವಿದ್ಯಾ ಅವರು ಬಂದು ಅದನ್ನು ಪಡೆದರು’ ಎಂದರು. ಪೊಲೀಸ್ ಸಿಬ್ಬಂದಿ ವಿನಯ್, ನಂದೀಶ್, ಪ್ರೇಮಾ, ಹರೀಶ್, ರವಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.