ಜಿ. ಪರಮೇಶ್ವರ
– ಫೇಸ್‌ಬುಕ್ ಚಿತ್ರ
ಹಾಸನ: ಜಾತ್ಯತೀತ ಎಂದು ಹೇಳಿಕೊಂಡು 25 ವರ್ಷಗಳಿಂದ ಹಾಸನದ ಜನರಿಗೆ ಮಂಕುಬೂದಿ ಎರಚಿದ ಜೆಡಿಎಸ್‌ನವರು, ಈಗ ಕೋಮುವಾದಿ ಬಿಜೆಪಿ ಜೊತೆಗೆ ಸೇರಿ ಮಂತ್ರಿಯಾಗಲು ನಾಚಿಕೆ ಆಗುವುದಿಲ್ಲವೇ? ಕೂಡಲೇ ಜಾತ್ಯತೀತ ಎನ್ನುವ ಪದವನ್ನು ತೆಗೆದು ಹಾಕಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಒತ್ತಾಯಿಸಿದರು.
ಬಿಜೆಪಿಯವರು ರಾಜ್ಯದಲ್ಲಿ ಹಿಜಾಬ್, ಗೋಮಾಂಸದಂತಹ ವಿಷಯಗಳನ್ನು ತೆಗೆದುಕೊಂಡು ಬಂದರು. ಏನೂ ಆಗಲಿಲ್ಲ. ಈಗ ಮುಡಾ ಹಗರಣ, ವಕ್ಫ್ ವಿವಾದಗಳನ್ನು ಇಟ್ಟುಕೊಂಡು ಹೋರಾಟ ಮಾಡುವುದಾಗಿ ಹೇಳುತ್ತಿದ್ದಾರೆ. ನಾವು ಅಲ್ಪಸಂಖ್ಯಾತರ ಪರವಾಗಿ ಇರುವುದು ನಿಜ. ಆದರೆ, ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಅತಿಹೆಚ್ಚು ನೋಟಿಸ್ ಕೊಟ್ಟವರು ಬಿಜೆಪಿಯವರು ಎಂದು ತಿರುಗೇಟು ನೀಡಿದರು.
ಮುಡಾ ಹಗರಣದ ಹೆಸರಿನಲ್ಲಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರೆ, ಅದು ಕೈಗೂಡುವುದಿಲ್ಲ. ಬದಲಾಗಿ ಉಪ ಚುನಾವಣೆಯ 3 ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದರು.
ಕಾಂಗ್ರೆಸ್‌ನವರು ಇದ್ದಕ್ಕಿದ್ದಂತೆಯೇ ಇಂತಹ ಸಮಾವೇಶ ಆಯೋಜಿಸಿರುವುದಕ್ಕೆ ಬಿಜೆಪಿ, ಜೆಡಿಎಸ್‌ನವರಿಗೆ ಆಶ್ಚರ್ಯವಾಗಿರಬಹುದು. ಹಲವಾರು ಜನರು, ಹಲವಾರು ಮಾತುಗಳನ್ನು ಆಡಿದ್ದಾರೆ. ಯಾರು ಏನೇ ಮಾತನಾಡಲಿ, ನಾವು ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ ಎಂಬ ಸಂದೇಶ ಹೋಗಬೇಕು. ಬಿಜೆಪಿ, ಜೆಡಿಎಸ್‌ನವರ ಟೀಕೆಗಳಿಗೆ ಉತ್ತರ ಕೊಡಬೇಕು ಎಂದು ಈ ಸಮಾವೇಶ ಆಯೋಜಿಸಿದ್ದೇವೆ ಎಂದು
2023 ರಲ್ಲಿ ರಾಜ್ಯದ ಜನರು ಪಾಠ ಕಲಿಸಿದ್ದರೂ, ಬಿಜೆಪಿ–ಜೆಡಿಎಸ್‌ನವರು ಪಾಠ ಕಲಿತಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮರ್ಥವಾಗಿ ಆಡಳಿತ ನಡೆಯುತ್ತಿದೆ. ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಬಿಜೆಪಿ ವರಿಷ್ಠರೂ ಕೂಡ ಬೇರೆ ರಾಜ್ಯಗಳಲ್ಲಿ ನಮ್ಮನ್ನು ನಕಲು ಮಾಡಿದ್ದು, ಗ್ಯಾರಂಟಿ ಘೋಷಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ, ಸರ್ಕಾರ ದಿವಾಳಿಯಾಗಿದೆ ಎಂಬೆಲ್ಲ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಯಾವುದೇ ಭೇದಭಾವ ಇಲ್ಲ. ನೀವು ಹುಟ್ಟು ಹಾಕುತ್ತಿದ್ದೀರಿ. ನಿಮ್ಮ ಮನೆ ಐದಾರು ಬಾಗಿಲು ಆಗಿವೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದು ಗೊತ್ತಾಗುತ್ತಿಲ್ಲ. ನಮ್ಮಲ್ಲಿ ಯಾರೂ ಗುಂಪುಗಾರಿಕೆ ಮಾಡಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.