ಹಾಸನ: ಕೊರೊನಾದಿಂದ ಮೃತಪಟ್ಟಿರುವ ಬಿಪಿಎಲ್ ಕುಟುಂಬದ ಒಬ್ಬರಿಗೆ₹1 ಲಕ್ಷ ಪರಿಹಾರ ಶೀಘ್ರ ಅರ್ಹರಿಗೆ ತಲುಪಲಿದೆ. ಸಂಬಂಧಪಟ್ಟಕುಟುಂಬ ಸದಸ್ಯರು ಕೂಡಲೇ ಅರ್ಜಿ ಸಲ್ಲಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತಪಟ್ಟಿರುವವರ ಪಟ್ಟಿ ಮಾಡಲು ಈಗಾಗಲೇ ಆಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ತಂದೆ-ತಾಯಿ ಕಳೆದುಕೊಂಡ ಸಣ್ಣ ಮಕ್ಕಳಿಗೂಪರಿಹಾರ ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪರಿಹಾರ ನೀಡಿಕೆ ಪ್ರಕ್ರಿಯೆ ಈಗಾಗಲೇ ಬೆಂಗಳೂರಿನಲ್ಲಿ ಆರಂಭವಾಗಿದೆ.ರಾಜ್ಯಾದಾದ್ಯಂತ ಸುಮಾರು 7 ಸಾವಿರ ಅರ್ಜಿ ಬಂದಿದ್ದು, ಅವುಗಳನ್ನು ಪರಿಶೀಲಿಸಿಆದಷ್ಟು ಬೇಗ ಪರಿಹಾರ ನೀಡಲಾಗುವುದು.ರಾಜ್ಯ ಸರ್ಕಾರದ ₹1 ಲಕ್ಷ ಜೊತೆಗೆ ಕೊರೊನಾದಿಂದ ಯಾರೆಲ್ಲಾ ಮೃತಪಟ್ಟಿದ್ದಾರೋ ಅಂಥಕುಟುಂಬಗಳಿಗೆ ಕೇಂದ್ರ ಸರ್ಕಾರ ₹50 ಸಾವಿರ ನೀಡಲಿದೆ ಎಂದರು.
‘ಸಿ.ಎಂ ಆರ್‌ಎಸ್‌ಎಸ್ ಗುಲಾಮಗಿರಿಯಿಂದ ಹೊರ ಬಂದು ಕೆಲಸ ಮಾಡಲಿ’ ಎಂಬ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶೋಕ್, ‘ನಾನೂ ಆರ್‌ಎಸ್‌ಎಸ್ ನಿಂದ ಬಂದವನು. ಆರ್‌ಎಸ್‌ಎಸ್ ಒಂದು ಸಾಮಾಜಿಕ ಸಂಸ್ಥೆ.ಯಾವುದೇ ರಾಜಕೀಯ ಪಕ್ಷ ಅಲ್ಲ. ಸಲಹೆ,ಸೂಚನೆ ಕೊಡುವ ವಿಚಾರದಲ್ಲಿ ಯಾವತ್ತೂ ಕೂಡ ಹಸ್ತಕ್ಷೇಪ ಮಾಡಿಲ್ಲ.ಆದರೆ, ಅವರು ಕುಟುಂಬರಾಜಕಾರಣದ ಪಕ್ಷದಿಂದ ಬಂದವರು. ಆದ್ದರಿಂದಮಹದೇವಪ್ಪ ಅವರಾಗಲೀ, ಕಾಂಗ್ರೆಸ್‌ನವರಾಗಲೀ, ಕುಟುಂಬ ಸಂಪ್ರದಾಯದಿಂದ ಹೊರಗಡೆ ಬರಲಿ.ಒಂದು ಕುಟುಂಬದ ಆಣತಿಯಂತೆ ನಡೆಯುವ ಕಾಂಗ್ರೆಸ್‌ನವರಿಗೆ ನಮಗೆ ಹೇಳುವ ನೈತಿಕ ಅಧಿಕಾರ ಇಲ್ಲ’ ಎಂದು ತಿರುಗೇಟು ನೀಡಿದರು.
‘ದೇಶದಲ್ಲಿಂದು ಕಾಂಗ್ರೆಸ್ ಮೂಲೆ ಗುಂಪಾಗಿದೆ. ಐದು ವರ್ಷ ಕಳೆದರೆ ಕಾಂಗ್ರೆಸ್ ಬದುಕಿದೆಯಾ,ಸತ್ತಿದೆಯಾ ಎಂದು ಬ್ಯಾಟರಿ ಹಾಕಿ ಹುಡುಕುವ ಸನ್ನಿವೇಶ ನಿರ್ಮಾಣವಾಗಲಿದೆ. ಇಂಥ ಹೀನಾಯಸ್ಥಿತಿಯಲ್ಲಿರುವವರು ಪಾಠ ಹೇಳಬೇಕಿಲ್ಲ ’ಎಂದು ಟಾಂಗ್ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಒಂದು ವಿದ್ಯಾನೀತಿ. ಕಾಂಗ್ರೆಸ್‌ನವರು ಇದು ಬೇಡ, ಇಟಲಿ ನೀತಿ, ಇಟಲಿ ಸಂಸ್ಕೃತಿ ಕೊಡಿ ಎಂದು ಕೇಳುತ್ತಿದ್ದಾರೆ. ಅದಕ್ಕೆನಾವು ಸಿದ್ಧರಿಲ್ಲ. ನಮ್ಮ ಸಂಸ್ಕೃತಿ, ನಮ್ಮ ಮಹಾಪುರುಷರೆಲ್ಲಾ ಪಠ್ಯ ಪುಸ್ತಕರಲ್ಲಿ ಬರಬೇಕು ಎಂಬಕಾರಣಕ್ಕೆ ಆತುರದಿಂದಲೇ ಎನ್‌ಇಪಿ ಜಾರಿಗೆ ತಂದಿದ್ದೇವೆ ಎಂದರು.
ಕೊರೊನಾ ಮೂರಲೇ ಅಲೆ ಯಾವಾಗ ಬರಲಿದೆ ಎಂಬ ನಿಖರ ಮಾಹಿತಿ ಇಲ್ಲ. ಸದ್ಯಕ್ಕೆ 6 ನೇ ತರಗತಿ ಒಳಪಟ್ಟ ಶಾಲೆಗಳನ್ನು ಆರಂಭ ಮಾಡುವುದಿಲ್ಲ. ಇನ್ನೂ 15 ದಿನ ಕಾಯುವಂತೆ ತಜ್ಞರೂ ವರದಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.