ADVERTISEMENT

ಬೆಲೆ ಏರಿಕೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 16:06 IST
Last Updated 13 ಏಪ್ರಿಲ್ 2022, 16:06 IST
ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಸನದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಸನದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಹಾಸನ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಎಸ್‍ಡಿಪಿಐ ಕಾರ್ಯಕರ್ತರು ನಗರದ ವಿವಿಧೆಡೆ ಬುಧವಾರ ಪ್ರತಿಭಟನೆ ನಡೆಸಿದರು.

ಪೆನ್ಷನ್‌ ಮೊಹಲ್ಲಾದ ಶಾಹಿ ಮಸೀದಿ ವೃತ್ತ, ಚಿಪ್ಪಿನಕಟ್ಟೆಯ ಗೌಸಿಯಾ ಸರ್ಕಲ್,ಅಂಬೇಡ್ಕರ್ ನಗರದ ಉಮರ್ ಫಾರೂಕ್ ಸರ್ಕಲ್‍ನಲ್ಲಿ ಭಿತ್ತಿಪತ್ರ ಮತ್ತುಪ್ರತಿಭಟನಾ ಸಭೆಗಳನ್ನು ಆಯೋಜಿಸಲಾಗಿತ್ತು.

ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಸಿದ್ಧಿಕ್ ಆನೆಮಹಲ್ ಮಾತನಾಡಿ, ‘ನರೇಂದ್ರ ಮೋದಿಪ್ರಧಾನಿಯಾಗುವ ಮೊದಲು ದೇಶದ ಜನರಿಗೆ ಅನೇಕ ಆಶ್ವಾಸನೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ಸ್ವಿಸ್ ಬ್ಯಾಂಕ್‍ನಲ್ಲಿರುವ ಕಪ್ಪು ಹಣ ತರಲಿಲ್ಲ. ಎಲ್ಲರಖಾತೆಗಳಿಗೆ ₹ 15 ಲಕ್ಷ ಜಮಾ ಮಾಡಲಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಬಿಜೆಪಿ ಅಧಿಕಾರ ಬಂದ ಮೇಲೆ ದೇಶದಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತರ ಮೇಲೆ ಆಕ್ರಮಣ ನಡೆದವು. ಇದರ ಜತೆಗೆ ದಿನನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಪರಿತಪಿಸುವಂತಾಗಿದೆ. ಜೀವನ ನಡೆಸುವುದು ಕಷ್ಟವಾಗಿದೆ. ಯಾವುದೇ ಅಭಿವೃದ್ಧಿ ಮಾಡದ ಕಾರಣ, ದೇಶದ ಜನರ ಗಮನ ಬೇರೆಡೆ ಸೆಳೆಯಲು ಮುಸ್ಲಿಮರನ್ನು ಬಲಿ ಪಶುಗಳನ್ನಾಗಿ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.

ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್ ಮಾತನಾಡಿ, ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಹಾಗೂ ಪೆಟ್ರೋಲ್ಬೆಲೆ ಏರಿಕೆಗೆ ಕಡಿವಾಣ ಹಾಕಲು ವಿಫಲವಾಗಿದೆ.2015ರಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ₹ 55, ಡೀಸೆಲ್ ಬೆಲೆ ₹ 35ಇತ್ತು. ಆದರೆ, ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದರೂ ದೇಶದಲ್ಲಿ ಇಂಧನ ದರ ಕಡಿಮೆಯಾಗಲಿಲ್ಲ’ ಎಂದರು.

ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಪ್ರದೀಪ್ ಮಾತನಾಡಿ, ‘ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡದೆ, ಜನರ ಗಮನ ಬೇರೆಡೆ ಸೆಳೆಯಲು, ಹಿಜಾಬ್, ಹಲಾಲ್, ಜಟ್ಕಾ ಕಟ್, ಮುಸ್ಲಿಂ ವ್ಯಾಪಾರಸ್ಥರಿಗೆ ಕಡಿವಾಣ ಇತ್ಯಾದಿ ವಿಷಯ ಮುಂದಿಟ್ಟು ಶಾಂತಿ ಕದಡುವ ಕೆಲಸ ಮಾಡುತ್ತಿದೆ’ ಎಂದುಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಫೈರೋಜ್ ಪಾಷ, ಶಕೀಲ್ ಅಹ್ಮದ್, ಅಶ್ವಕ್ ಅಹಮದ್, ಅಜ್ಮಲ್ ಪಾಷ, ಆಫ್ರೀದ್, ಭೀಮ್‌ ಆರ್ಮಿ ಸಂಚಾಲಕಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.